ಬೆಂಗಳೂರು, ಡಿ 27 (Daijiworld News/MB) : ವಿಶ್ವದಲ್ಲೇ ಅತಿ ಎತ್ತರದ ಯೇಸು ಪ್ರತಿಮೆಯನ್ನು ಕನಕಪುರದ ಕಪಾಲಿ ಬೆಟ್ಟದಲ್ಲಿ ನಿರ್ಮಿಸಲು ಅಡಿಗಲ್ಲು ಹಾಕಿರುವ ಡಿಕೆ ಶಿವಕುಮಾರ್ ಅವರನ್ನು ಸಂಸದ ಅನಂತ ಕುಮಾರ್ ಹೆಗ್ಡೆ ಟೀಕೆ ಮಾಡಿದ್ದಾರೆ.
ಈ ವಿಷಯದ ಕುರಿತು ಟ್ವೀಟ್ ಮಾಡಿರುವ ಅವರು, "ಇಲ್ಲೊಬ್ಬತಿಹಾರಿ ಜೈಲಿನಿಂದ ಬಂದ ಮಹನೀಯರೊಬ್ಬರು, ಯಾವುದೋ ಹುದ್ದೆಯ ಆಸೆಯೊಂದಿಗೆ, ಅವರ ಇಟಲಿಯಮ್ಮನನ್ನು ಪ್ರಸನ್ನಗೊಳಿಸಲು, ಅತಿ ದೊಡ್ಡ ಯೇಸುವಿನ ಪ್ರತಿಮೆ ಸ್ಥಾಪಿಸಿ ತಮ್ಮ ಪೌರುಷವನ್ನು ಪ್ರದರ್ಶಿಸಲು ಸಜ್ಜಾಗಿದ್ದಾರೆ ಎಂದು ಹೇಳಿದ್ದಾರೆ.
ಹಾಗೆಯೇ ಈ ಓಲೈಕೆ ರಾಜಕೀಯಕ್ಕೆ ಪೈಪೋಟಿ ನೀಡಲು ಕಾಂಗ್ರೆಸ್ ಪಕ್ಷದಿಂದ ಇನ್ನು ಹೆಚ್ಚಿನ ಗುಲಾಮರು ಅಖಾಡಕ್ಕೆ ಇಳಿದರು ಅಚ್ಚರಿಯಿಲ್ಲ ಎಂದು ವ್ಯಂಗ್ಯ ಮಾಡಿದ್ದಾರೆ.
ಕಾಂಗ್ರೆಸ್ ಕ್ರೈಸ್ತರಾಗಿ ಮತಾಂತರ ಹೊಂದಿದವರಿಗೆ ಮಾತ್ರ ಮಣೆ ಹಾಕುತ್ತದೆ. ಈ ಸಂಪ್ರದಾಯ ಅರಿಯದ ಆ ಪಕ್ಷದ ಬಾಕಿ ನಾಯಕರು, ಈಗಲಾದರೂ ಆತ್ಮ-ಸಾಕ್ಷಿ ಇದ್ದಲ್ಲಿ ತಮ್ಮ ಗುಲಾಮಿ ಮನೋಭಾವವನ್ನು ತಿರಸ್ಕರಿಸಿ ಆ ಪಕ್ಷದ ವ್ಯವಸ್ಥೆಯನ್ನು ಧಿಕ್ಕರಿಸಿ ಹೊರ ಬರಲಿ ಎಂದಿದ್ದಾರೆ.
ಈ ಟ್ವೀಟ್ಗೆ ಪ್ರತಿಕ್ರಿಯೆ ನೀಡಿರುವ ಡಿ. ಕೆ. ಶಿವಕುಮಾರ್ "ನಾನು ನಮ್ಮ ಪ್ರಜಾತಂತ್ರ ವ್ಯವಸ್ಥೆಯ ಭದ್ರಬುನಾದಿಯಾದ ಸಮಾನತೆ ಮತ್ತು ಸರ್ವಧರ್ಮ ಸಹಿಷ್ಣುತೆಯಲ್ಲಿ ನಂಬಿಕೆ ಇಟ್ಟಿರುವವನು, ನನ್ನ ಕನಕಪುರ ಕ್ಷೇತ್ರದಲ್ಲಿ ಎಲ್ಲ ಜಾತಿ ಧರ್ಮದ ಜನರೂ ಇದ್ದಾರೆ. ಅವರ ಭಾವನೆ ಗೌರವಿಸುವುದು ನನ್ನ ಧರ್ಮ. ಡಾ. ಅಂಬೇಡ್ಕರ್ ಸಾಹೇಬರ ಸಂವಿಧಾನ ಸುಡಲು ಮುಂದಾದ ಅಲ್ಪರಿಂದ ಪಾಠ ಹೇಳಿಸಿಕೊಳ್ಳುವ ಜರೂರತ್ತು ನನಗಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಈ ಕುರಿತು ಮಂಗಳೂರಿನಲ್ಲಿ ಸಚಿವ ಈಶ್ವರಪ್ಪ ಅವರು ಪ್ರತಿಕ್ರಿಯೆ ನೀಡಿದ್ದು, "ಅವರು ಕ್ರೈಸ್ತರ ಮತಗಳನ್ನು ಪಡೆಯುವ ಸಲುವಾಗಿ ಈ ಪ್ರತಿಮೆ ನಿರ್ಮಾಣ ಮಾಡಲು ಮಂದಾಗಿದ್ದಾರೆ. ಸೋನಿಯಾ ಗಾಂಧಿಯವರನ್ನು ಮೆಚ್ಚಿಸುವ ಸಲುವಾಗಿ ಈ ಕಾರ್ಯಕ್ಕೆ ಮುಂದಾಗಿದ್ದಾರೆ. ಸೋನಿಯಾ ಗಾಂಧಿಯನ್ನು ಮೆಚ್ಚಿಸಲು ಹೋದ್ರೆ ಸಿದ್ಧರಾಮಯ್ಯನಿಗೆ ಆದ ಗತಿಯೇ ಇವರಿಗೂ ಆಗುತ್ತದೆ" ಎಂದು ಹೇಳಿದ್ದಾರೆ.