ಬೆಂಗಳೂರು, ಡಿ 27 (Daijiworld News/MSP): ಕಾಲಕ್ಕೆ ತಕ್ಕಂತೆ ನಾವು ಬದಲಾಗಬೇಕು ಎಂಬ ಮಾತಿದೆ. ಇದೇ ಮಾತಿನಂತೆ ಕರಾವಳಿಯ ಸಂಪ್ರಾದಾಯಿಕ ಕಲೆ ಯಕ್ಷಗಾನಕ್ಕೂ ಮಾರ್ಡನ್ ಟಚ್ ಸಿಗಲಿದೆ. ಯಕ್ಷಗಾನ ಪ್ರಸಂಗಗಳ ಡಿಜಿಟಲೀಕರಣದತ್ತ ಸರ್ಕಾರ ಮಹತ್ವದ ಹೆಜ್ಜೆ ಇರಿಸಿದೆ.
ಕರ್ನಾಟಕ ಯಕ್ಷಗಾನ ಅಕಾಡೆಮಿ ವತಿಯಿಂದ ‘ಯಕ್ಷಗಾನ ಪ್ರಸಂಗಗಳ ಡಿಜಟಲೀಕರಣ’ ಯೋಜನೆಗೆ ಚಾಲನೆ ದೊರಕ್ಕಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ. ರವಿ ಅವರು ಯಕ್ಷಗಾನ ಪ್ರಸಂಗಗಳ ಲೋಕಾರ್ಪಣೆ ಮಾಡಿದ್ದಾರೆ.
ಕರ್ನಾಟಕ ಯಕ್ಷಗಾನ ಅಕ್ಯಾಡೆಮಿ ಮತ್ತು ಯಕ್ಷವಾಹಿನಿ (ರಿ), ಬೆಂಗಳೂರು, ಇವರ ಸಹಯೋಗದೊಂದಿಗೆ ಯಕ್ಷಗಾನ ಪ್ರಸಂಗಗಳ ಡಿಜಿಟಲೀಕರಣಕ್ಕೆ ಚಾಲನೆ ದೊರಕಿದೆ. ಈ ವಿಚಾರವನ್ನು ಟ್ವೀಟ್ ಮಾಡಿರುವ ಸಚಿವ ಸಿ.ಟಿ ರವಿ " ನಮ್ಮ ಹೆಮ್ಮೆಯ ಕಲೆ ಯಕ್ಷಗಾನ ಇನ್ನು ಮುಂದೆ ಡಿಜಿಟಲ್ ಮಾಧ್ಯಮದ ಮೂಲಕ ನಿಮ್ಮ ಮೊಬೈಲ್ ಹಾಗೂ ಕಂಪ್ಯೂಟರ್ ಗಳಿಗೆ ಬರಲಿದ್ದು, ಇದು ಒಂದು ಸಾಧನೆ ಎಂದು ಭಾವಿಸಿದ್ದೇನೆ" ಎಂದಿದ್ದಾರೆ.
ಕಾರ್ಯಕ್ರಮದಲ್ಲಿ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ.ಎಂ.ಎ.ಹೆಗಡೆ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದು ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎಸ್. ರಂಗಪ್ಪ, ಯಕ್ಷಗಾನ ವಾಹಿನಿ ಅಧ್ಯಕ್ಷ ಡಾ. ಆನಂದರಾಮ ಉಪಾಧ್ಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.