ಬೆಂಗಳೂರು, ಡಿ 27 (Daijiworld News/MB) : ಕೇಂದ್ರ ಸರಕಾರ ಸಿದ್ದಪಡಿಸಿದ ದೇಶದ ಉತ್ತಮ ಆಡಳಿತ ಸೂಚ್ಯಂಕ ಪಟ್ಟಿಯಲ್ಲಿ ಕರ್ನಾಟಕ ರಾಜ್ಯ ಮೂರನೇ ಸ್ಥಾನ, ಆರ್ಥಿಕ ಶಿಸ್ತು ಪಾಲನೆಯಲ್ಲಿ ಕರ್ನಾಟಕವೇ ನಂಬರ್ ಒನ್ ಸ್ಥಾನ ಪಡೆದಿದ್ದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸಂತಸ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.
"ಆರ್ಥಿಕ ಶಿಸ್ತು ಪಾಲನೆಯಲ್ಲಿ ಕರ್ನಾಟಕವೇ ನಂಬರ್ ಒನ್, ಉತ್ತಮ ಆಡಳಿತದಲ್ಲೂ ಮೂರನೇ ಸ್ಥಾನ. ಶಿಕ್ಷಣ, ಆರೋಗ್ಯ, ಆರ್ಥಿಕ ಬೆಳವಣಿಗೆ, ಕಾನೂನು ನೆರವು, ನ್ಯಾಯಾಂಗ ಸೇವೆ ಮುಂತಾದ ಹತ್ತು ವಿಭಾಗಗಳಲ್ಲಿ 50 ವಿಷಯಗಳನ್ನು ಇಟ್ಟುಕೊಂಡು ಕೇಂದ್ರ ಸರ್ಕಾರ ಮಾಡಿರುವ 'ಉತ್ತಮ ಆಡಳಿತ ಸೂಚ್ಯಂಕ'ವು ಉತ್ತಮ ಆಡಳಿತ ನೀಡಲು ಸ್ಫೂರ್ತಿ ಮತ್ತು ಮಾದರಿಯಾಗಿದೆ" ಎಂದು ಹೇಳಿದ್ದಾರೆ.
ಈ ಕುರಿತು ಬಿಜೆಪಿ ಕರ್ನಾಟಕ ಟ್ವೀಟ್ ಮಾಡಿದ್ದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಉನ್ನತಿಯತ್ತ ಸಾಗುತ್ತಿದೆ. ಆರ್ಥಿಕ ಶಿಸ್ತು ಪಾಲನೆಯಲ್ಲಿ ಪ್ರಥಮ ಸ್ಥಾನ ಮತ್ತು ಉತ್ತಮ ಆಡಳಿತದಲ್ಲಿ ಮೂರನೇ ಸ್ಥಾನ ಪಡೆದಿದೆ ನಮ್ಮ ರಾಜ್ಯ. ಉತ್ತಮ ಆಡಳಿತ ಸೂಚ್ಯಂಕ (ಜಿಜಿಐ)ವು ನಮಗೆ ಸ್ವಚ್ಛ ಮತ್ತು ದಕ್ಷ ಆಡಳಿತ ನೀಡಲು ಸ್ಫೂರ್ತಿ ಒದಗಿಸಲಿದೆ ಎಂದು ಹೇಳಿದೆ.
ಕೇಂದ್ರ ಸರಕಾರದ ಉತ್ತಮ ಆಡಳಿತ ಸೂಚ್ಯಂಕದಲ್ಲಿ ದಕ್ಷಿಣ ಭಾರತದ ರಾಜ್ಯಗಳು ಉನ್ನತ ಸ್ಥಾನ ಪಡೆದಿದೆ. ಈ ಪೈಕಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ರಾಜ್ಯಗಳ ಸಾಧನೆಯನ್ನು ತಿಳಿಯುವ ಉದ್ದೇಶದಿಂದ ಕೇಂದ್ರ ಸರಕಾರವು ದೇಶದಾದ್ಯಂತ ಮೂಲಭೂತ ಸೌಕರ್ಯ, ಮಾನವ ಅಭಿವೃದ್ಧಿ ಬೆಂಬಲ, ಸಾಮಾಜಿಕ ರಕ್ಷಣೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸೇರಿದಂತೆ ಅಭಿವೃದ್ಧಿಯ 50 ಅಗತ್ಯ ಅಂಶಗಳ ಕುರಿತು ಅಧ್ಯಯನ ನಡೆಸಿದ್ದು ಇದರಲ್ಲಿ ಕರ್ನಾಟಕ ಉತ್ತಮ ಸ್ಥಾನವನ್ನು ಪಡೆದಿದೆ.
ಪ್ರಥಮ ಸ್ಥಾನದಲ್ಲಿ ತಮಿಳುನಾಡು, ದ್ವಿತೀಯ ಸ್ಥಾನದಲ್ಲಿ ಮಹಾರಾಷ್ಟ್ರ ಹಾಗೂ ಮೂರನೇ ಸ್ಥಾನದಲ್ಲಿ ಕರ್ನಾಟಕವಿದೆ. ಹಾಗೆಯೇ ಕೊನೆಯ ಐದು ಸ್ಥಾನಗಳಲ್ಲಿ ಒಡಿಶಾ, ಬಿಹಾರ, ಗೋವಾ, ಉತ್ತರ ಪ್ರದೇಶ ಮತ್ತು ಜಾರ್ಖಂಡ್ ಇವೆ.