ಬೆಂಗಳೂರು, ಡಿ 27 (Daijiworld News/MB) : ಕಳೆದ ಸಾಲಿನ ವಾರ್ಷಿಕ ಪರೀಕ್ಷೆಯಲ್ಲಿ ಎಲ್ಲ ವಿಷಯದಲ್ಲೂ ಉತ್ಕೃಷ್ಟ ಉತ್ತರ ನೀಡಿರುವ ಉತ್ತರ ಪ್ರತಿಗಳನ್ನು ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಲು ವೆಬ್ಸೈಟ್ನಲ್ಲಿ ಪ್ರಕಟ ಮಾಡಲು ನಿರ್ಧಾರ ಕೈಗೊಂಡಿದೆ.
ಈ ಮೊದಲು ಪದವಿ ಪೂರ್ವ ಇಲಾಖೆ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ 36 ವಿಷಯಗಳ ಉತ್ಕೃಷ್ಟ ಉತ್ತರ ಪ್ರತಿಗಳನ್ನು ತನ್ನ ವೆಬ್ಸೈಟ್ನಲ್ಲಿ ಪ್ರಕಟ ಮಾಡಿತ್ತು. ಈಗ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಗಳಿಗೂ ಅನುಕೂಲವಾಗುವಂತೆ ಕಳೆದ ಸಾಲಿನ ಟಾಪರ್ಗಳ ಉತ್ತರ ಪತ್ರಿಕೆಯನ್ನು ವೆಬ್ ಸೈಟ್ನಲ್ಲಿ ಪ್ರಕಟಿಸಲು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಗುರುವಾರ ನಿರ್ದೇಶನ ನೀಡಿದ್ದಾರೆ.
ಸಚಿವರು ಪ್ರತಿ ತಿಂಗಳು ನಡೆಸುವ ಸಂವೇದನ ಫೋನ್ ಇನ್ ಕಾರ್ಯಕ್ರಮದಲ್ಲಿ ಹಲವರು ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಾರ್ಷಿಕ ಪರೀಕ್ಷೆಯ ಉತ್ಕೃಷ್ಟ ಉತ್ತರ ಪ್ರತಿಗಳನ್ನು ಪ್ರಸಕ್ತ ಸಾಲಿನ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವೆಬ್ಸೈಟ್ನಲ್ಲಿ ಪ್ರಕಟ ಮಾಡುವಂತೆ ಕೇಳಿಕೊಂಡಿದ್ದರು.
ಈ ಹಿನ್ನಲೆಯಲ್ಲಿ ಪಿಯು ಇಲಾಖೆ ಈಗಾಗಲೇ ವೆಬ್ಸೈಟ್ನಲ್ಲಿ ಉತ್ಕೃಷ್ಟ ಉತ್ತರ ಪ್ರತಿಗಳನ್ನು ಬಿಡುಗಡೆ ಮಾಡಿದ್ದು ಈಗ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಸಚಿವರ ಸೂಚನೆ ಮೇರೆಗೆ ವೆಬ್ಸೈಟ್ನಲ್ಲಿ ಪ್ರಕಟ ಮಾಡಿದ್ದು http://kseeb.kar.nic.in/ನಲ್ಲಿ ವಿದ್ಯಾರ್ಥಿಗಳು ಮತ್ತು ಪಾಲಕರಿಗೆ ಮಾಹಿತಿ ದೊರೆಯಲಿದೆ.
ಈ ಕುರಿತು ಮಾತನಾಡಿದ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕಿ, ವಿ. ಸುಮಂಗಳಾ, "ವೆಬ್ಸೈಟ್ನಲ್ಲಿ ಕಳೆದ ಸಾಲಿನ ಟಾಪರ್ ಉತ್ತರ ಪ್ರತಿಯನ್ನು ಪ್ರಕಟಿಸುವ ಕುರಿತು ಯಾವುದೇ ಕ್ರಮ ಇನ್ನೂ ತೆಗೆದುಕೊಂಡಿಲ್ಲ. ಸಚಿವರ ನಿರ್ದೇಶನದಂತೆ, ಕಡತಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು" ಎಂದು ಹೇಳಿದ್ದಾರೆ.