ಜಮ್ಮು-ಕಾಶ್ಮೀರ, ಡಿ 27(Daijiworld News/PY) : ಕುಪ್ವಾರ ಮತ್ತು ಪೂಂಛ್ ಸೆಕ್ಟರ್ನಲ್ಲಿ ಗಡಿನಿಯಂತ್ರಣ ರೇಖೆ ಸಮೀಪ ಪಾಕಿಸ್ತಾನ ಪಡೆ ನಡೆಸಿದ ಅಪ್ರಚೋದಿತ ದಾಳಿಗೆ ಭಾರತೀಯ ಸೇನೆಯ ಪ್ರತಿದಾಳಿ ನಡೆಸಿದ ವೇಳೆ ನಾಲ್ವರು ಪಾಕಿಸ್ತಾನಿ ಯೋಧರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಭಾರತೀಯ ಸೇನೆಯು ಕುಪ್ವಾರ ಮತ್ತು ಪೂಂಛ್ ಸೆಕ್ಟರ್ ಪ್ರದೇಶದ ಗಡಿನಿಯಂತ್ರಣ ರೇಖೆ ಸಮೀಪ ಪಾಕಿಸ್ತಾನ ಪಡೆ ನಡೆಸಿದ ದಾಳಿಗೆ ಪ್ರತಿದಾಳಿ ನಡೆಸಿದ್ದು, ಪಾಕ್ ಪಡೆಯ ಮೂರು ಶಿಬಿರಗಳು, ಎರಡು ಬಂಕರ್ಗಳನ್ನು ಭಾರತೀಯ ಸೇನೆ ನಾಶಗೊಳಿಸಿದೆ. ಬಳಿಕ ಪೂಂಛ್ ಜಿಲ್ಲೆಯ ಕೃಷ್ಣಾ ಘಾಟಿ ಸೆಕ್ಟರ್ ನಲ್ಲಿ ಜನವಸತಿ ಪ್ರದೇಶವನ್ನು ಪಾಕಿಸ್ತಾನ ಪಡೆ ಗುರಿಯಾಗಿಸಿಕೊಂಡಿದ್ದು, ದಾಳಿಯನ್ನು ಮುಂದುವರಿಸಿದ ಕಾರಣ ಗಡಿಭಾಗದಲ್ಲಿ ಜನರು ಗಾಬರಿಗೊಂಡಿರುವುದಾಗಿ ವರದಿಗಳು ತಿಳಿಸಿವೆ.
ಗುರುವಾರ ಪಾಕಿಸ್ತಾನ ಪಡೆಯು ಕುಪ್ವಾರ ಸೆಕ್ಟರ್ನ ಲೀಪಾ ಕಣಿವೆ ಪ್ರದೇಶದ ಸುತ್ತಲಿನ ಪ್ರದೇಶದಲ್ಲಿರು ಭಾರತೀಯ ಸೇನಾ ಶಿಬಿರಗಳನ್ನು ನಾಶಪಡಿಸಲು ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಿದ್ದಾರೆ, ಪಾಕಿಸ್ತಾನ ಪಡೆ ನಡೆಸಿದ ಗುಂಡಿನ ದಾಳಿಗೆ ಭಾರತೀಯ ಸೇನಾ ಪಡೆಯ ಯೋಧ ಹುತಾತ್ಮನಾಗಿದ್ದು, ದಾಳಿಯಲ್ಲಿ ಬಾರಾಮುಲ್ಲಾ ಉರಿ ಸೆಕ್ಟರ್ನಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದರು ಎಂದು ತಿಳಿದುಬಂದಿದೆ.