ನವದೆಹಲಿ, ಡಿ 27 (Daijiworld News/MSP): ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ನಾಗರಿಕತ್ವಕ್ಕಾಗಿ ರಾಷ್ಟ್ರೀಯ ನೋಂದಣಿ (ಎನ್ಆರ್ಸಿ) ವಿರೋಧಿಸಿ ದೇಶವ್ಯಾಪ್ತಿ ಪ್ರತಿಭಟನೆ ನಡೆಯುತ್ತಿರುವ ಬೆನ್ನಲ್ಲೇ ಕೆಲವು ಮುಸ್ಲಿಂ ಧರ್ಮಗುರುಗಳು, ಬುದ್ಧಿಜೀವಿಗಳು ಮತ್ತು ಕಾನೂನು ಚಿಂತಕರು ಶೀಘ್ರದಲ್ಲೇ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಲಿದ್ದಾರೆ.
“ಮುಸ್ಲಿಂ ಧರ್ಮಗುರುಗಳು, ಮುಖಂಡರು , ಶಿಕ್ಷಣ ತಜ್ಞರು, ಬುದ್ಧಿಜೀವಿಗಳು, ಮತ್ತು ಮದರಸಗಳ ವಕೀಲರ ನಿಯೋಗವು ಗೃಹ ಸಚಿವ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು ಶೀಘ್ರದಲ್ಲೇ ಭೇಟಿ ಮಾಡಲಿದೆ” ಎಂದು ಇಮಾಮ್ ಸಂಸ್ಥೆಯ ಮುಖ್ಯಸ್ಥ ಡಾ.ಇಮಾಮ್ ಉಮರ್ ಅಹ್ಮದ್ ಇಲ್ಯಾಸಿ ರಾಷ್ಟ್ರೀಯ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಸಿಎಎ ಮತ್ತು ಎನ್ಆರ್ಸಿ ಬಗ್ಗೆ ಅವರ ಕಳವಳ ಗೊಂದಲಗಳ ಬಗ್ಗೆ ನಿಯೋಗವು ಪ್ರಧಾನಿ ಮತ್ತು ಗೃಹ ಸಚಿವರಿಗೆ ಮನವರಿಕೆ ಮಾಡಲಿದೆ ಎಂದು ಇಲ್ಯಾಸಿ ತಿಳಿಸಿದ್ದಾರೆ.
ರಾಜಕೀಯ ಪಕ್ಷಗಳು, ವಿವಿಧ ಸಂಸ್ಥೆಗಳು ಮತ್ತು ಸಂಸ್ಥೆಗಳು ಪೌರತ್ವ ಕಾಯ್ದೆ ಮತ್ತು ಎನ್ಆರ್ಸಿ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳನ್ನು ಆಯೋಜಿಸಿವೆ. ಆದರೆ ಈ ಪ್ರತಿಭಟನೆಯಲ್ಲಿ ಪ್ರತಿಭಟನಕಾರರು ಹಿಂಸಾಚಾರದಿಂದ ದೂರವಿರಬೇಕು ಎಂದು ಇದೇ ವೇಳೆ ಮನವಿ ಮಾಡಿದರು.
ಪ್ರತಿಭಟನೆ ನಡೆಸುವುದು ನಮ್ಮ ಪ್ರಜಾಪ್ರಭುತ್ವದ ಹಕ್ಕು. ನಾವು ಪ್ರತಿಭಟಿಸಬೇಕು, ಆದರೆ ಶಾಂತಿಯುತವಾಗಿರಬೇಕು. ದೇಶದ ನಾಗರಿಕರಾಗಿ ದೇಶದ ಶಾಂತಿಯನ್ನು ಕಾಪಾಡುವುದು ನಮ್ಮೆಲ್ಲರ ಜವಬ್ದಾರಿಯಾಗಿದೆ ಎಂದು ಇದೇ ವೇಳೆ ತಿಳಿಸಿದ್ದಾರೆ.