ಕೇರಳ, ಡಿ 27(Daijiworld News/PY) : ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಕೇರಳದ ಚರ್ಚ್ವೊಂದರಲ್ಲಿ ಕ್ರಿಸ್ಮಸ್ ಹಬ್ಬದಂದು ಕ್ರೈಸ್ತ ಸಮುದಾಯದ ಯುವಕ ಯುವತಿಯರು ಸಾಂಪ್ರದಾಯಿಕ ಮುಸ್ಲಿಂ ಉಡುಗೆಯಾದ ಹಿಜಾಬ್ ಮತ್ತು ಟೋಪಿ ಧರಿಸಿ ಕ್ರಿಸ್ಮಸ್ ಕ್ಯಾರೋಲ್ಗಳನ್ನು ಹಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಾ ಇದೆ.
ಕೇರಳದ ಪಥನಂತಿಟ್ಟದ ಕೊಝನ್ಚೇರಿಯ ಸೈಂಟ್ ಥೋಮಸ್ ಮರ್ ತೋಮ ಚರ್ಚ್ನಲ್ಲಿ ಸುಮಾರು 14 ಜನ ಯುವಕ ಯುವತಿಯರು ಲಯಬದ್ಧವಾಗಿ ಚಪ್ಪಾಳೆ ತಟ್ಟುತ್ತಾ ಕ್ರಿಸ್ಮಸ್ ಕ್ಯಾರೋಲ್ಗಳನ್ನು ಹಾಡುತ್ತಿರುವುದು ಈ ವೀಡಿಯೋದಲ್ಲಿ ಕಂಡುಬಂದಿದೆ.
ದೇಶದ ಮುಸ್ಲಿಮರ ಹಕ್ಕುಗಳ ರಕ್ಷಣೆಗಾಗಿ ಹಾಗೂ ಸಿಎಎ ವಿರೋಧಿಸಿ ಈ ವಿನೂತನ ಪ್ರತಿಭಟನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಫಾ.ಡೇನಿಯಲ್ ಟಿ ಫಿಲಿಪ್, "ಸಮುದಾಯಗಳ ಅಥವಾ ವಿಭಿನ್ನ ವ್ಯಕ್ತಿಗಳ ನಡುವೆ ತಾರತಮ್ಯ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ, ನಮಗೆ ಬೇಕಾಗಿರುವುದು ಎಲ್ಲರ ನಡುವೆ ಶಾಂತಿ" ಎಂದು ತಿಳಿಸಿದ್ದಾರೆ.
ದೇಶದಲ್ಲಿ ಸಿಎಎ ವಿರುದ್ಧದ ಆಂದೋಲನಗಳಿಗೆ ಪ್ರತಿಕ್ರಿಯಿಸಿದ ನರೇಂದ್ರ ಮೋದಿ, ಸಿಎಎ ವಿರೋಧಿ ಪ್ರತಿಭಟನೆಯ ಸಮಯದಲ್ಲಿ ಹಿಂಸಾಚಾರದಲ್ಲಿ ಪಾಲ್ಗೊಂಡವರನ್ನು ಅವರು ಧರಿಸಿರುವ ಉಡುಪಿನಿಂದ ಗುರುತಿಸಬಹುದು ಎಂದು ಟೀಕಿಸಿದ್ದರು ಎಂದು ತಿಳಿಸಿದ್ದಾರೆ.