ಬೆಂಗಳೂರು, ಡಿ 28 (Daijiworld News/MB) : ರಾಮನಗರ ಜಿಲ್ಲೆ ಕನಕಪುರ ತಾಲೂಕು ಉಯ್ಯಂಬಳ್ಳಿ ಕಪಾಲಿ ಬೆಟ್ಟದಲ್ಲಿ ಮಾಜಿ ಸಚಿವ ಡಿಕೆ ಶಿವಕುಮಾರ್ ವಿಶ್ವದಲ್ಲೇ ಅತೀ ಎತ್ತರವಾದ ಯೇಸು ಪ್ರತಿಮೆ ನಿರ್ಮಾಣ ಮಾಡಲು ಮಂದಾಗಿರುವುದು ಈಗ ಬಾರಿ ವಿವಾದಕ್ಕೆ ಗುರಿಯಾಗಿದ್ದು "ಸರ್ಕಾರಿ ಗೋಮಾಳ ಜಮೀನಿನಲ್ಲಿ ಯೇಸು ಪ್ರತಿಮೆ ಸ್ಥಾಪನೆ ಮಾಡುತ್ತಿರುವುದು ಸರಿಯಲ್ಲ" ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, "ಈ ಜಮೀನನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನೀಡಿದ್ದು ಇದರಲ್ಲಿ ಯೇಸು ಪ್ರತಿಮೆ ಸ್ಥಾಪನೆ ಮಾಡುತ್ತಿರುವುದು ಸರಿಯಲ್ಲ. ಅದನ್ನು ವಾಪಸ್ ಪಡೆಯಲು ಕ್ರಮ ಕೈಗೊಳ್ಳಲಾಗುವುದು" ಎಂದು ತಿಳಿಸಿದ್ದಾರೆ.
"ನಲ್ಲಹಳ್ಳಿ ಗ್ರಾಮದ ಸರ್ವೆ ಸಂಖ್ಯೆ 283 ರಲ್ಲಿ 231 ಎಕರೆ 35 ಗುಂಟೆ ಗೋಮಾಳ ಜಮೀನಿದೆ. ಇದರಲ್ಲಿ 10 ಎಕರೆ ಜಮೀನನ್ನು ಪ್ರತಿಮೆ ನಿರ್ಮಾಣಕ್ಕೆಂದೇ ನೀಡಲಾಗಿದೆ. ಇಲಾಖೆ ಮಾಹಿತಿಯ ಪ್ರಕಾರ ಈ ಪ್ರದೇಶದಲ್ಲಿ 2 ಸಾವಿರಕ್ಕೂ ಹೆಚ್ಚು ಜಾನುವಾರುಗಳಿದ್ದು, ಒಟ್ಟು 548 ಎಕರೆ ಗೋಮಾಳದ ಜಮೀನು ಮೀಸಲಿಡಬೇಕು" ಎಂದು ಹೇಳಿದ್ದಾರೆ.
"ಕಾಂಗ್ರೆಸ್ ಸರ್ಕಾರ, 2017ರಲ್ಲಿ ಶೇ 10 ರಷ್ಟು ಮಾರ್ಗಸೂಚಿ ದರ ವಿಧಿಸಿ ಜಮೀನು ನೀಡಲು ತೀರ್ಮಾನ ಮಾಡಿತ್ತು. ಹಾರೋಬೆಲೆ ಕಪಾಲಿ ಬೆಟ್ಟ ಅಭಿವೃದ್ಧಿ ಟ್ರಸ್ಟ್ ಶೇ 10 ರಷ್ಟು ಹಣ ನೀಡಲು ಸಾಧ್ಯವಿಲ್ಲ. ಅದನ್ನು ಮನ್ನಾ ಮಾಡಬೇಕು ಎಂದು ಸರ್ಕಾರಕ್ಕೆ ಮನವಿ ನೀಡಿತ್ತು. ಸರ್ಕಾರಿ ಗೋಮಾಳ ಜಮೀನು ಬೇಕಾಬಿಟ್ಟಿದಾನ ಮಾಡಲು ಅದು ಶಿವಕುಮಾರ್ ಅವರ ಖಾಸಗಿ ಆಸ್ತಿ ಅಲ್ಲ. ರಾಮನಗರ ಜಿಲ್ಲಾಧಿಕಾರಿಯಿಂದ ಈ ವಿಚಾರದ ಕುರಿತು ವರದಿ ಕೇಳಿದ್ದೇನೆ. ಎಲ್ಲಾ ವಿಚಾರದಲ್ಲಿ ಸ್ಪಷ್ಟತೆ ದೊರೆಯುವವರೆಗೆ ಯಾವುದೇ ಕಾರ್ಯಕ್ಕೂ ಅನುಮತಿ ನೀಡುವುದಿಲ್ಲ" ಎಂದು ತಿಳಿಸಿದ್ದಾರೆ.
ಡಿಕೆ ಶಿವಕುಮಾರ್ ಅವರು ಯೇಸು ಪ್ರತಿಮೆ ನಿರ್ಮಾಣ ಮಾಡಲು ಮುಂದಾದ ಬೆನ್ನಲ್ಲೇ ತೀವ್ರ ವಿರೋಧ ವ್ಯಕ್ತವಾಗಿದ್ದು ಸೋನಿಯಾ ಗಾಂಧಿಯನ್ನು ಓಲೈಕೆ ಮಾಡುವ ಉದ್ದೇಶದಿಂದ ಯೇಸು ಪ್ರತಿಮೆ ನಿರ್ಮಾಣ ಮಾಡಲು ಮುಂದಾಗಿದ್ದಾರೆ ಎಂದು ಬಿಜೆಪಿ ಟೀಕೆ ಮಾಡುತ್ತಿದೆ.