ನವದೆಹಲಿ, ಡಿ 27 (Daijiworld News/MSP): ಭಾರತೀಯ ಸ್ಟೇಟ್ ಬ್ಯಾಂಕ್ ಎಸ್ ಬಿ ಐ ಎಟಿಎಂ ಗಳಲ್ಲಿ ಹಣ ಹಿಂಪಡೆಯುವ ವ್ಯವಸ್ಥೆ ಯನ್ನು ಜ.1ರಿಂದ ವನ್ ಟೈಂ ಪಾಸ್ ವರ್ಡ್ (ಓಟಿಪಿ)ಆಧಾರಿತ ಸೇವೆಯನ್ನಾಗಿ ಮಾರ್ಪಡಿಸುವುದಾಗಿ ಎಸ್ ಬಿಐ ಪ್ರಕಟಿಸಿದೆ.
ಆದರೆ ಇದು ಎಲ್ಲಾ ವ್ಯವಹಾರಕ್ಕೂ ಅನ್ವಯವಾಗುವುದಿಲ್ಲ. ರಾತ್ರಿ 8ರಿಂದ ಬೆಳಗ್ಗೆ 8ರವರೆಗೆ 10,000 ರೂ.ಗಳಿಗಿಂತಲೂ ಹೆಚ್ಚು ಹಣ ವಿತ್ ಡ್ರಾ ಮಾಡುವವರಿಗೆ ಮಾತ್ರ ಈ ನಿಯಮ ಅನ್ವಯವಾಗಲಿದೆ. ಅನ್ ಲೈನ್ ಮೂಲಕ ವಂಚನೆ, ಎಟಿಎಂ ಕಾರ್ಡ್ ಗಳ ದುರುಪಯೋಗ ತಡೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಟ್ವಿಟರ್ ನಲ್ಲಿ ಬ್ಯಾಂಕ್ ಪ್ರಕಟಿಸಿದೆ.
ಎಟಿಎಂನಿಂದ ಹಣ ವಿತ್ ಡ್ರಾ ಮಾಡುವವರು ಎಟಿಎಂ ಯಂತ್ರದಲ್ಲಿ ತಮ್ಮ ಪಿನ್ ಸಂಖ್ಯೆ, 10,ಸಾವಿರ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ನಮೂದಿಸಿದ ನಂತರ, ಗ್ರಾಹಕರ ಖಾತೆಯೊಂದಿಗೆ ಜೋಡಿಸಲ್ಪಟ್ಟಿರುವ ಅವರ ಮೊಬೈಲ್ ಸಂಖ್ಯೆಗೆ ನಾಲ್ಕು ಅಂಕೆಗಳ ವನ್ ಟೈಂ ಪಾಸ್ ವರ್ಡ್ ರವಾನೆಯಾಗಲಿದೆ. ಆ ಸಂಖ್ಯೆಯನ್ನು ಎಟಿಎಂನಲ್ಲಿ ನಮೂದಿಸಿದ ನಂತರವಷ್ಟೇ ಗ್ರಾಹಕರು ಹಣ ಪಡೆಯಲು ಸಾಧ್ಯವಾಗಲಿದೆ.