ನವದೆಹಲಿ, ಡಿ 28 (Daijiworld News/MSP): "ಕಳೆದ ಐದು ವರ್ಷಗಳಲ್ಲಿ ತಮ್ಮ ದೇಶದಲ್ಲಿ ಧಾರ್ಮಿಕ ತಾರತಮ್ಯ ಎದುರಿಸುತ್ತಿದ್ದ ನರೇಂದ್ರ ಮೋದಿ ಸರ್ಕಾರವೂ ಸುಮಾರು 600 ಮುಸ್ಲಿಮರಿಗೆ ಪೌರತ್ವ ನೀಡಿದೆ ಎಂದು ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವ ಹರ್ದೀಪ್ ಸಿಂಗ್ ಪುರಿ" ಹೇಳಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ ಮೂಲಕ ಮುಸ್ಲಿಮರ ವಿರುದ್ದ ತಾರತಮ್ಯ ಮಾಡಲಾಗುತ್ತಿದೆ ಎಂಬ ಟೀಕೆ ಕೇಳಿಬರುತ್ತಿರುವ ಹಿನ್ನಲೆಯಲ್ಲಿ ಈ ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ. ತಮ್ಮ ದೇಶಗಳಲ್ಲಿ ಕಿರುಕುಳಕ್ಕೊಳಗಾದ ಮುಸ್ಲಿಮರು ಭಾರತೀಯ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ ಎಂಬುದು ಸಿಎಎ ಅರ್ಥವಲ್ಲ. ವಾಸ್ತವವಾಗಿ ಕಳೆದ ಐದು ವರ್ಷಗಳಲ್ಲಿ ಪಿಎಂ ಮೋದಿಯವರ ಸರ್ಕಾರವು ಹಲವಾರು ದೇಶಗಳ ಸುಮಾರು 600 ಮುಸ್ಲಿಮರಿಗೆ ಪೌರತ್ವವನ್ನು ನೀಡಿದೆ. ಸಿಎಎ ಭಾರತದ ಜಾತ್ಯತೀತ ನಿಲುವನ್ನು ಎಂದಿಗೂ ಬದಲಾಯಿಸುವುದಿಲ್ಲ ಎಂದು ಟ್ವೀಟ್ ನಲ್ಲಿ ಹೇಳಿದ್ದಾರೆ.
ಟಿಬೆಟ್, ಶ್ರೀಲಂಕಾ, ಉಂಗಾಂಡಾ ಅಥವಾ ಬಾಂಗ್ಲಾ ದೇಶದ ಅನೇಕ ನಿರಾಶ್ರಿತರಿಗೆ ಆಶ್ರಯ ನೀಡಲಾಗಿದೆ. ಸಿಎಎ ಕಾಯ್ದೆಯೂ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದು ಭಾರತದ ನಿಲುವನ್ನು ತೋರಿಸುತ್ತದೆ ಎಂದು ಟ್ವೀಟ್ನಲ್ಲಿ ಹೇಳಿದ್ದಾರೆ.
ಸಿಎಎ ಯಾವುದೇ ಭಾರತೀಯ ನಾಗರಿಕನ ಧರ್ಮ, ಜಾತಿ, ಮತ, ಪಂಥ, ಜನಾಂಗೀಯತೆ ಅಥವಾ ಜನಾಂಗವನ್ನು ಲೆಕ್ಕಿಸದೆ ಅವರ ಹಕ್ಕುಗಳನ್ನು ಬದಲಾಯಿಸುವುದಿಲ್ಲ ಅಥವಾ ಸವಾಲು ಮಾಡುವುದಿಲ್ಲ. ಆದರೆ ವಿರೋಧಿ ಪಕ್ಷಗಳು ಭಾರತದಲ್ಲಿನ ಧಾರ್ಮಿಕ ಅಲ್ಪಸಂಖ್ಯಾತರನ್ನು ಸಿಎಎ ಕಾಯ್ದೆ ಮೂಲಕ ಬೆದರಿಸಿ ಪ್ರಚೋದಿಸುತ್ತಿದ್ದಾರೆ. ಭಾರತದ ಹಿತಾಸಕ್ತಿಗಳಿಗೆ ವಿರುದ್ಧವಾದ ಶಕ್ತಿಗಳನ್ನು ಸಜ್ಜುಗೊಳಿಸಲು ಹಿಂಸಾಚಾರವನ್ನು ಪ್ರಚೋದಿಸಲು ವಿರೋಧ ಪಕ್ಷಗಳು ಸರ್ಕಾರ ವಿರೋಧಿ ಅಭಿಯಾನವನ್ನು ನಡೆಸುತ್ತಿವೆ. ಸಾರ್ವಜನಿಕ ಆಸ್ತಿ-ಪಾಸ್ತಿ ನಾಶ ಮಾಡುತ್ತಿದೆ, ಇನ್ನು ಒಂದಷ್ಟು ಮಂದಿ ವಿದೇಶಿ ಹಸ್ತಕ್ಷೇಪವನ್ನು ಆಹ್ವಾನಿಸುವ ಕೀಳುಮಟ್ಟಕ್ಕೆ ಹೋಗಿದ್ದಾರೆ ಎಂದು ಟ್ವೀಟ್ ನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.