ಉತ್ತರ ಪ್ರದೇಶ, ಡಿ 28 (Daijiworld News/MB) : ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸಿ ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದವರ ಆಸ್ತಿ ಜಪ್ತಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ ಬಳಿಕ ಸಿಎಂ ಆದಿತ್ಯನಾಥ್ ಕಚೇರಿ ಟ್ವೀಟ್ ಮಾಡಿದ್ದು "ಈಗ ಪ್ರತಿಭಟನಕಾರರು ಕಣ್ಣೀರು ಹಾಕಬಹುದು, ಯಾಕೆಂದರೆ ಉತ್ತರ ಪ್ರದೇಶದಲ್ಲಿರುವುದು ಯೋಗಿ ಸರಕಾರ " ಎಂದು ಹೇಳಿದೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಯೋಗಿ ಅವರ ಕಚೇರಿ, "ಯೋಗಿ ಆದಿತ್ಯನಾಥ್ ಅವರ ಆಡಳಿತವನ್ನು ಪ್ರಶ್ನಿಸುತ್ತಿದ್ದ ಪ್ರತಿಯೊಬ್ಬ ವ್ಯಕ್ತಿಯು ಯೋಗಿಯವರ ಈ ನಿರ್ಧಾರದಿಂದ ನಾವು ಯೋಗಿ ಅವರ ಆಡಳಿತ ಪ್ರಶ್ನೆ ಮಾಡುವುದರ ಮೂಲಕ ತಪ್ಪು ಮಾಡಿದ್ದೇವೆ ಎಂದು ಆಲೋಚಿಸುತ್ತಿದ್ದಾರೆ" ಎಂದು ತಿಳಿಸಿದೆ.
"ಈ ನಿರ್ಧಾರದಿಂದಾಗಿ ಎಲ್ಲಾ ಗಲಭೆಕೋರರು ಆಘಾತಕ್ಕೊಳಗಾಗಿದ್ದಾರೆ. ಯೋಗಿ ಸರಕಾರದ ಈ ಕಠಿಣ ನಿರ್ಧಾರದಿಂದ ಮೌನವಾಗಿದ್ದಾರೆ. ನೀವು ಏನು ಬೇಕಾದರೂ ಮಾಡಿ. ಆದರೆ ಹಾನಿ ಮಾಡಿದವರಿಂದಲ್ಲೇ ಹಾನಿಗೆ ಪರಿಹಾರ ಪಾವತಿಸಲಾಗುವುದು ಎಂದು ಯೋಗಿ ಅವರು ಹೇಳಿದ್ದಾರೆ. ಉತ್ತರ ಪ್ರದೇಶದಲ್ಲಿ ಯೋಗಿ ಸರಕಾರ ಇರುವುದರಿಂದ ಎಲ್ಲಾ ಹಿಂಸಾತ್ಮಕ ಪ್ರತಿಭಟನಾಕಾರರು ಈಗ ಅಳುತ್ತಾರೆ" ಎಂದಿದೆ.
ಉತ್ತರ ಪ್ರದೇಶ ಸರ್ಕಾರವು, ಪ್ರತಿಭಟನಕಾರರು ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದ್ದಾರೆ ಎಂದು 498 ಸುತ್ತೋಲೆ ಕಳುಹಿಸಿದ್ದು ಶೀಘ್ರದಲ್ಲೇ ಅವರ ಆಸ್ತಿಯನ್ನು ವಶಪಡಿಸಿ ಕೊಳ್ಳುತ್ತೇವೆ ಎಂದು ತಿಳಿಸಿದೆ.
ಈ ಹಿನ್ನಲೆಯಲ್ಲಿ ಆದಿತ್ಯನಾಥ್ ಸೂಚನೆಯಂತೆ ಅಧಿಕಾರಿಗಳಿಗೆ ಪ್ರತಿಭಟನಕಾರರನ್ನು ಗುರುತಿಸಿ ಬಂಧಿಸಲು ಹೇಳಿದ್ದು ಈ ಪ್ರಕ್ರಿಯೆ ನಡೆಯುತ್ತಿದೆ. ಡಿಸೆಂಬರ್ 30ರವರೆಗೆ ಸಾರ್ವಜನಿಕ ಆಸ್ತಿಗಳಿಗೆ ಒಟ್ಟು ಎಷ್ಟು ನಷ್ಟ ಸಂಬಂವಿಸಿದೆ ಎಂದು ಪರಿಶೀಲನೆ ನಡೆಸಲಾಗುತ್ತದೆ.
ಈ ನಿರ್ಧಾರ 2010 ರ ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ಅವಲಂಬಿಸಿದೆ. ಅಲಹಾಬಾದ್ ಹೈಕೋರ್ಟ್ ಹಿಂಸಾತ್ಮಕವಾಗಿ ಪ್ರತಿಭಟನೆ ನಡೆಸಿ ಸಾರ್ವಜನಿಕ ಆಸ್ತಿಗಳಿಗೆ ಹಾನಿ ಮಾಡಿದರೆ ಹಾನಿಯನ್ನು ಸರ್ಕಾರ ಹಿಂಪಡೆಯಬಹುದೆಂದು ತೀರ್ಪು ನೀಡಿದೆ.