ದಾವಣಗೆರೆ, ಡಿ 28(Daijiworld News/PY) : "ಡಿಕೆಶಿ ತಂದೆ-ತಾಯಿ ಶಿವನನ್ನು ಆರಾಧಿಸುತ್ತಾರೆ, ಅವರು ಡಿಕೆಶಿಯಂತಹ ಮಗನನ್ನು ಪಡೆಯಲು ಪುಣ್ಯ ಮಾಡಿರಬೇಕು, ಶಿವ ಎಂದು ಹೆಸರಿಟ್ಟರೆ ಇವರು ಮಾತ್ರ ಏಸು ಕುಮಾರನಾಗಲು ಮುಂದಾಗಿದ್ದಾರೆ" ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಹೇಳಿದ್ದಾರೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ಡಿಕೆಶಿ ತಂದೆ-ತಾಯಿ ಶಿವನ ಆರಾಧಕರಾಗಿದ್ದು, ಅವರ ಪುತ್ರನಿಗೆ ಶಿವಕುಮಾರ್ ಎಂದು ನಾಮಕರಣ ಮಾಡಿದ್ದಾರೆ, ಆದರೆ, ಡಿಕೆಶಿ ಅವರಿಗೆ ಶಿವ ಎಂದು ಹೆಸರಿಟ್ಟರೆ, ಇವರು ಮಾತ್ರ ಏಸು ಕುಮಾರನಾಗಲು ಮುಂದಾಗಿದ್ದಾರೆ" ಎಂದರು.
"ಡಿಕೆಶಿ ಕಾಲಭೈರವನ ಬೆಟ್ಟದಲ್ಲಿ ಏಸುವಿನ ವಿಗ್ರಹ ಮಾಡಲು ಹೊರಟಿರುವ ಕಾರಣ, ಏಸು ಕುಮಾರ ಎಂದು ನಾವೇ ನಾಮಕರಣ ಮಾಡಿ ಬಿಡೋಣಾ, ಇನ್ನು ಮುಂದೆ ಡಿಕೆ ಶಿವಕುಮಾರ್ ಹೆಸರು ಬೇಡ" ಎಂದು ಅಣಕಿಸಿದ್ದಾರೆ.
"ಡಿಕೆಶಿ ಅವರು ಪವಿತ್ರವಾದ ಕಾಲಭೈರವನ ಬೆಟ್ಟದಲ್ಲಿ ಏಸುವಿನ ವಿಗ್ರಹ ಮಾಡಲು ಹೊರಟ್ಟಿದ್ದು, ಇಡೀ ರಾಜ್ಯಕ್ಕೆ ಅವಮಾನ ಮಾಡಿದ್ದಾರೆ. ಅದರಲ್ಲೂ ಸರ್ಕಾರಿ ಜಾಗದಲ್ಲಿ ಏಸುವಿನ ವಿಗ್ರಹ ನಿರ್ಮಿಸಲು ಹೊರಟ ನಿಮಗೆ ಏನೆನ್ನಬೇಕು" ಎಂದು ಪ್ರಶ್ನಿಸಿದ್ದಾರೆ.
"ವಲ್ಲಭಬಾಯಿ ಪಟೇಲ್ ಅವರ ಪ್ರತಿಮೆ ನಿರ್ಮಾಣ ಮಾಡುವಾಗ ಡಿಕೆಶಿ ವಿರೋಧಿಸಿದ್ದಾರೆ, ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರ ಕಟ್ಟಲೂ ವಿರೋಧಿಸಿದ್ದಾರೆ, ನಾವೂ ಕೂಡ ಕಾಲಭೈರವನ ಬೆಟ್ಟದಲ್ಲಿ ಏಸುವಿನ ಪ್ರತಿಮೆ ನಿರ್ಮಾಣ ಮಾಡಲು ಬಿಡುವುದಿಲ್ಲ ಎಂದು" ರೇಣುಕಾಚಾರ್ಯ ತಿಳಿಸಿದ್ದಾರೆ.