ಲಖನೌ, ಡಿ 29 (Daijiworld News/MB) : ಉತ್ತರ ಪ್ರದೇಶ ಪೊಲೀಸರು ನಾನು ನಿವೃತ್ತ ಐಪಿಎಸ್ ಅಧಿಕಾರಿ ಎಸ್.ಆರ್.ದರಪುರಿ ಅವರ ನಿವಾಸಕ್ಕೆ ಭೇಟಿ ನೀಡುವ ವೇಳೆ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಆರೋಪ ಮಾಡಿದ್ದಾರೆ.
ನಿವೃತ್ತ ಐಪಿಎಸ್ ಅಧಿಕಾರಿ ಎಸ್.ಆರ್.ದರಪುರಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸಿ ಪ್ರತಿಭಟನೆ ನಡೆಸಿ ಬಂಧಿತರಾಗಿದ್ದು ಅವರ ನಿವಾಸಕ್ಕೆ ಭೇಟಿ ನೀಡುವ ಸಲುವಾಗಿ ಪ್ರಿಯಾಂಕಾ ವಾದ್ರಾ ಗಾಂಧಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದು ಮಾರ್ಗ ಮಧ್ಯೆ ಉತ್ತರ ಪ್ರದೇಶ ಪೊಲೀಸರು ತಡೆದಿದ್ದಾರೆ. ಈ ಸಂದರ್ಭದಲ್ಲಿ ಪ್ರಿಯಾಂಕಾ ಗಾಂಧಿ ಮತ್ತು ಪೊಲೀಸರ ನಡುವೆ ಮಾತುಕತೆ ನಡೆದಿತ್ತು. ಆದರೆ ಪ್ರಿಯಾಂಕ ಪೊಲೀಸರಿಂದ ತಪ್ಪಿಸಿಕೊಂಡು ನಿವೃತ್ತ ಐಪಿಎಸ್ ಅಧಿಕಾರಿ ಎಸ್.ಆರ್.ದರಪುರಿ ಅವರ ನಿವಾಸಕ್ಕೆ ಹೋಗಿದ್ದರು.
ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಿಯಾಂಕಾ, ಉತ್ತರ ಪ್ರದೇಶ ಪೊಲೀಸರು ನನ್ನನ್ನು ಸುತ್ತುವರಿದಿದ್ದರು, ಓರ್ವ ಮಹಿಳಾ ಪೇದೆ ನನ್ನ ಕತ್ತು ಹಿಡಿದುಕೊಂಡರು ಇನ್ನೊಬ್ಬರು ನನ್ನನ್ನು ತಳ್ಳಿದರು. ಅಧಿಕಾರಿ ಮನೆಗೆ ತೆರಳದಂತೆ ಪೊಲೀಸ್ ವಾಹನವನ್ನು ಅಡ್ಡಲಾಗಿ ಇಡಲಾಗಿತ್ತು. ನೀವು ಹೋಗಲು ಇಲ್ಲ ಎಂದು ತಡೆದರು ಎಂದು ಆರೋಪಿಸಿದ್ದಾರೆ.