ಬೆಂಗಳೂರು, ಡಿ 29(Daijiworld News/PY) : ಅಷ್ಟಮಠದ ಹಿರಿಯ ಯತಿ, ವಿಶ್ವೇಶ ತೀರ್ಥ ಸ್ವಾಮೀಜಿ(88) ಕೃಷ್ಣೈಕ್ಯರಾಗಿದ್ದು, ಶ್ರೀಗಳ ಕೊನೆ ಆಸೆಯಂತೆ ಅವರನ್ನು ಇಂದು ವೆಂಟಿಲೇಟರ್ ಸಹಿತ ಅಂಬುಲೆನ್ಸ್ ಮೂಲಕ ಅಧೋಕ್ಷಜ ಮಠಕ್ಕೆ ಆಸ್ಪತ್ರೆಯಿಂದ ಸ್ಥಳಾಂತರ ಮಾಡಲಾಗಿತ್ತು. ಮಠದಲ್ಲಿ ಶ್ರೀಗಳಿಗೆ 6 ಮಂದಿ ವೈದ್ಯರ ತಂಡದಿಂದ ಚಿಕಿತ್ಸೆ ನೀಡಲಾಗುತ್ತಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಠದಲ್ಲಿಯೇ ಶ್ರೀಗಳು ದೈವಾಧೀನರಾಗಿದ್ದಾರೆ.
ಕಳೆದ ಬಾರಿ ಹರ್ನಿಯಾ ಆಪರೇಷನ್ಗೆ ಒಳಗಾಗಿದ್ದ ಶ್ರೀಗಳು ತಮ್ಮ ಕೊನೆಯಾಸೆಯ ಬಗ್ಗೆ ತಿಳಿಸಿದ್ದು, ಬೆಂಗಳೂರಿನ ವಿದ್ಯಾಪೀಠದಲ್ಲಿ ಅಂತಿಮ ಕ್ರಿಯಾ ವಿಧಿವಿಧಾನ ನಡೆಯಬೇಕು ಎಂದು ಲಿಖಿತ ರೂಪದಲ್ಲಿ ಬರೆದು ಆಗಾಗ ಕಿರಿಯ ಶ್ರೀಗಳಿಗೆ ಅದನ್ನು ತೋರಿಸುತ್ತಿದ್ದರು. ಜಾಗವನ್ನು ಕೂಡ ಸೂಚಿಸಿ, ಇಲ್ಲೇ ನನ್ನ ಬೃಂದಾವನ ಆಗಬೇಕು ಎಂದು ಶ್ರೀಗಳು ಬರೆದು ಕೊಟ್ಟಿದ್ದರು ಎಂದು ರಘುಪತಿ ಭಟ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.