ಬೆಂಗಳೂರು, ಡಿ 29(Daijiworld News/PY) : ಇಂದು ಬೆಳಗ್ಗೆ ದೈವಾಧೀನರಾದ ಪೇಜಾವರ ವಿಶ್ವೇಶ ತೀರ್ಥ ಶ್ರೀಗಳ ಪಾರ್ಥಿವ ಶರೀರವನ್ನು ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜಿನ ಮೈದಾನದಲ್ಲಿ ದರ್ಶನಕ್ಕೆ ಇಡಲಾಗಿದ್ದು, ಸಾವಿರಾರು ಭಕ್ತರು ಅಂತಿಮ ದರ್ಶನ ಪಡೆಯುತ್ತಿದ್ದಾರೆ.
ಉಡುಪಿಯಿಂದ ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳ ಪಾರ್ಥೀವ ಶರೀರವನ್ನು ವಿಶೇಷ ಸೇನಾ ಹೆಲಿಕಾಪ್ಟರ್ ಮೂಲಕ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಕರೆತಂದಿದ್ದು, ಬಳಿಕ ಬಸವನಗುಡಿಯ ನ್ಯಾಷನಲ್ ಕಾಲೇಜಿನ ಮೈದಾನಕ್ಕೆ ತರಲಾಯಿತು.
ಸಂಜೆ 5.30ರವರೆಗೆ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು ಬಳಿಕ ಮೆರವಣಿಗೆಯೊಂದಿಗೆ ವಿದ್ಯಾಪೀಠಕ್ಕೆ ತಂದು ಬಳಿಕ ರಾಘವೇಂದ್ರ, ಕೃಷ್ಣ, ಮದ್ವಚಾರ್ಯರ ಮೂರ್ತಿಗೆ ಪೂಜೆ ಮಾಡಿದ ಬಳಿಕ ಅಂತ್ಯ ಕ್ರಿಯೆ ನಡೆಯಲಿದೆ.
ವಿದ್ಯಾಪೀಠದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಪಾಸ್ ಇದ್ದವರನ್ನು ಮಾತ್ರ ಒಳಗಡೆ ಬಿಡುತ್ತಿದ್ದಾರೆ.