ತಿರುವನಂತಪುರಂ, ಡಿ 29(Daijiworld News/PY) : ಪ್ರೀತಿಗೆ ವಯಸ್ಸಿನ ಹಂಗಿಲ್ಲ ಎಂಬ ಮಾತನ್ನು ನಿಜ ಮಾಡಲು ಹೊರಟಿದ್ದ ಕೇರಳದ ವೃದ್ಧ ಜೋಡಿಯೊಂದು ತಮ್ಮ 60ನೇ ವಯಸ್ಸಿನಲ್ಲಿ ಒಬ್ಬರನ್ನೊಬ್ಬರು ಪ್ರೀತಿಸಿ ಶನಿವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಥಾಯ್ಕಟ್ಟುಶ್ಶೇರಿಯ ಲಕ್ಷ್ಮೀ ಅಮ್ಮಾಳ್ (65) ಹಾಗೂ ಕೋಚಾನಿಯಾನ್ ಮೆನನ್ (67) ಇವರಿಗೆ ಸುಮಾರು ಇಪ್ಪತ್ತು ವರ್ಷಗಳ ಪರಿಚಯ. ಪರಿಚಯ ಪ್ರೀತಿಗೆ ತಿರುಗಿ ಈಗ ಸಪ್ತಪದಿ ತುಳಿದಿದ್ದಾರೆ.
ಸುಮಾರು 20 ವರ್ಷಗಳ ಹಿಂದೆ ಲಕ್ಷ್ಮೀ ಅಮ್ಮಾಳ್ ಪತಿಯ ಕೆಟರಿಂಗ್ ಕೆಲಸದಲ್ಲಿ ಕೋಚಾನಿಯಾನ್ ಮೆನನ್ ಸಹಾಯಕನಾಗಿ ದುಡಿಯುತ್ತಿದ್ದರು. ಲಕ್ಷ್ಮಿ ಅಮ್ಮಾಲ್ ಅವರ ಪತಿ ಜಿ ಕೆ ಕೃಷ್ಣ ಅಯ್ಯರ್ ನಿಧನರಾದ ಬಳಿಕ ಲಕ್ಷ್ಮಿ ಅಮ್ಮಾಲ್ ಅವರು ವೃದ್ದಾಶ್ರಮಕ್ಕೆ ತೆರಳಿದ್ದರು.
ಮತ್ತೊಂದೆಡೆ ಕೋಚಾನಿಯಾನ್ ಮೆನನ್ ಕೆಲಸಕ್ಕೆಂದು ಬೇರೆಡೆ ತೆರಳಿದ್ದರು, ಈ ವೇಳೆ ವಯಸ್ಸಾಗಿದ್ದ ಮೆನನ್ ಅವರನ್ನು ಬಲವಂತವಾಗಿ ಮನೆಯಿಂದ ಹೊರದಬ್ಬಲ್ಪಟ್ಟಿದ್ದರು, ಮನೆಯಿಂದ ಹೊರಬಿದ್ದ ಮೆನನ್ ಕೆಲಸಕ್ಕಾಗಿ ಬೀದಿ, ಬೀದಿ ಅಲೆದು ಸುಸ್ತಾಗಿ ಒಂದು ದಿನ ಮೂರ್ಛೆರೋಗದಿಂದ ರಸ್ತೆ ಮೇಲೆ ಬಿದ್ದುಬಿಟ್ಟಿದ್ದರು.ಇವರನ್ನು ನೋಡಿದ ಎನ್ ಜಿಒ ಸಂಸ್ಥೆಯೊಂದು ತ್ರಿಶ್ಶೂರಿನ ವೃದ್ಧಾಶ್ರಮಕ್ಕೆ ತಂದು ಸೇರಿಸಿತ್ತು. ಹೀಗೆ ಹಲವು ವರ್ಷಗಳ ಬಳಿಕ ಇಬ್ಬರೂ ವೃದ್ಧಾಶ್ರಮದಲ್ಲಿ ಭೇಟಿಯಾಗಿದ್ದರು.
ಲಕ್ಷ್ಮಿ ಪತಿ ನಿಧನರಾಗುವ ಮುನ್ನ ಎಂದಿಗೂ ನಾನು ಲಕ್ಷ್ಮಿ ಜೊತೆ ಇರುವುದಾಗಿ ಕೋಚಿಯಾನ್ ಮಾತು ಕೊಟ್ಟಿದ್ದರು. ಹಾಗಾಗಿ ಅವರಿಗೆ ನೀಡಿದ ಮಾತಿನ ಪ್ರಕಾರ ಇಂದಿಗೂ ಕೋಚಿಯಾನ್ ಲಕ್ಷ್ಮಿ ಅವರ ಜೊತೆಯೇ ಇದ್ದು ಇದೀಗ ವೃದ್ಧಾಶ್ರಮದಲ್ಲಿಯೇ ಸಚಿವ ವಿ ಎಸ್ ಶಿವ ಕುಮಾರ್ ಸಮ್ಮುಖದಲ್ಲಿ ಹಾರ ಬದಲಾಯಿಸಿಕೊಂಡು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.