ಬೆಳಗಾವಿ, ಡಿ 30 (Daijiworld News/ MB ) : ಕರ್ನಾಟಕ- ಮಹಾರಾಷ್ಟ್ರದಲ್ಲಿ ಗಡಿ ವಿವಾದಕ್ಕೆ ಸಂಬಂಧಿಸಿ ತೀವ್ರವಾಗಿ ಪ್ರತಿಭಟನೆ ನಡೆಯುತ್ತಿದ್ದು, ಶಿವಸೇನಾ ಕಾರ್ಯಕರ್ತರು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಪ್ರತಿಕೃತಿ ದಹನ ಮಾಡಿದ್ದಾರೆ.
ಗಡಿ ವಿಚಾರದಲ್ಲಿ ಪ್ರತಿಭಟನೆಗಳು ಹೆಚ್ಚಾಗುತ್ತಿದ್ದು, ಈ ಎರಡು ರಾಜ್ಯಗಳ ನಡುವೆ ಸಂಚಾರ ರದ್ದುಗೊಂಡಿದೆ.
ಕೊಲ್ಹಾಪುರ ಬಸ್ ನಿಲ್ದಾಣದ ಹತ್ತಿರ ಭಾನುವಾರ ಪ್ರತಿಭಟನೆ ನಡೆಸಿದ ಶಿವಸೇನಾ ಕಾರ್ಯಕರ್ತರು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಪ್ರತಿಕೃತಿ ದಹನ ಮಾಡಿದ್ದಾರೆ. ಆ ಬಳಿಕ ಅಪ್ಸರಾ ಥಿಯೇಟರ್ ಬಳಿ ಮೆರವಣಿಗೆ ಬಳಿ ಮೆರವಣಿಗೆಯಲ್ಲಿ ಹೋಗಿ ಕನ್ನಡ ಸಿನಿಮಾಗಳ ಪ್ರದರ್ಶನವನ್ನು ಒತ್ತಾಯಪೂರ್ವಕವಾಗಿ ನಿಲ್ಲಿಸಿದರು. ಹಾಗೆಯೇ ಪ್ರತಿಭಟನಕಾರರು ಕನ್ನಡ ಸಿನಿಮಾ ಪೋಸ್ಟರ್ ಗಳನ್ನು ಹರಿದು ಹಾಕಿ, ಕನ್ನಡದಲ್ಲಿ ಬರೆದ ಕೆಲವು ಅಂಗಡಿಗಳ ನಾಮಫಲಕಗಳಿಗೆ ಕಪ್ಪು ಮಸಿ ಬಳಿದರು.
ಈ ಪ್ರತಿಭಟನೆಯ ನೇತೃತ್ವವನ್ನು ಕಾಂಗ್ರೆಸ್ ಮಾಜಿ ಶಾಸಕ ಸಟೇಜ್ ಪಾಟೀಲ್ ಮತ್ತು ಶಿವಸೇನಾ ಸಂಸದ ಧೈರ್ಯಶೀಲ ವಹಿಸಿದ್ದು, ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದಾಗ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಯಿತು.
ಕಳೆದ ಶನಿವಾರ ಬೆಳಗಾವಿ ಕನ್ನಡಪರ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆಯವರ ಪ್ರತಿಕೃತಿ ದಹನ ಮಾಡಿದ್ದು ಈ ಹಿನ್ನಲೆಯಲ್ಲಿ ಮಹಾರಾಷ್ಟ್ರದ ಕಡೆಯಿಂದ ಶಿವಸೇನಾ, ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಸಿಎಂ ಯಡಿಯೂರಪ್ಪ ಅವರ ಪ್ರತಿಕೃತಿ ದಹನ ಮಾಡಿದರು.
ಕರ್ನಾಟಕ ನವನಿರ್ಮಾಣ ಸೇನೆ ನಾಯಕರು ಎಂಇಎಸ್ ಕಾರ್ಯಕರ್ತರನ್ನು ಎರಡೂ ರಾಜ್ಯಗಳ ಗಡಿಯಲ್ಲಿ ಗುಂಡಿಕ್ಕಿ ಕೊಲ್ಲಬೇಕು ಎಂಬ ಹೇಳಿಕೆ ನೀಡಿದ್ದು ಈ ಹೇಳಿಕೆ ಮಹಾರಾಷ್ಟ್ರದಲ್ಲಿ ಶಿವಸೇನಾ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿತ್ತು.