ಬೆಂಗಳೂರು, ಡಿ 30 (Daijiworld News/ MB ) : ಉಡುಪಿ ಪೇಜಾವರ ಶ್ರೀಗಳೇ ಕಟ್ಟಿದ ವಿದ್ಯಾಪೀಠದಲ್ಲಿ ಶ್ರೀ ಕೃಷ್ಣನ ಸನ್ನಿಧಾನದ ಪಕ್ಕದಲ್ಲೇ ಶ್ರೀಗಳ ಬೃಂದಾವನ ನಿರ್ಮಾಣ ಮಾಡಲಾಗಿದ್ದು, ಇಂದಿನಿಂದ ಭಕ್ತರು ಶ್ರೀಗಳ ಬೃಂದಾವನ ದರ್ಶನ ಮಾಡಬಹುದು ಎಂದು ಪೂರ್ಣ ಪ್ರಜ್ಞಾ ವಿದ್ಯಾಪೀಠದ ಕಾರ್ಯದರ್ಶಿ ಕೇಶವಾಚಾರ್ಯ ತಿಳಿಸಿದ್ದಾರೆ.
ಉಡುಪಿ ಭಾಗದ ಮಧ್ವ ಸಂಪ್ರದಾಯದಂತೆ ಭಾನುವಾರ ಬೆಂಗಳೂರಿನಲ್ಲಿ ಅಂತಿಮ ವಿಧಿ ವಿಧಾನಗಳು ನಡೆಸಲಾಗಿದೆ. ಈಡೀ ರಾತ್ರಿ ಪೂರ್ತಿ ಭಜನೆ-ಆರಾಧನೆ ನಡೆದಿದ್ದು ಶ್ರೀಗಳ ಬೃಂದಾವನ ಪ್ರವೇಶವಾಗಿದೆ. ಈ ಹಿನ್ನಲೆಯಲ್ಲಿ ಇಂದಿನಿಂದ ಭಕ್ತರು ಶ್ರೀಗಳ ಬೃಂದಾವನ ದರ್ಶನ ಮಾಡಬಹುದಾಗಿದೆ.
ಶ್ರೀಗಳ ಬೃಂದಾವನ ಪ್ರವೇಶ ಮುಗಿದ ಬಳಿಕ ಮಾತನಾಡಿದ ಕೇಶವ ಚಾರ್ಯ, "ಇಂದಿನಿಂದ ಪಾಯಶ್ಚಿತ ಹೋಮ, ಪವಿತ್ರಯಾಗ, ಪುಷ್ಪಾರ್ಣ ಯಾಗ, ಇತ್ಯಾದಿ ಶಾಂತಿ ಹೋಮಗಳು ಮತ್ತು ಯಾಗಗಳು ಪ್ರತಿನಿತ್ಯ ನಡೆಯಲಿದೆ. 12ನೇ ದಿನದಂದು ವಿಶೇಷ ಮಹಾಸಮಾರಾಧನೆ ನಡೆಯಲಿದ್ದು, ಪರಮಪೂಜ್ಯ ವಿಶ್ವ ಪ್ರಸನ್ನ ಅವರ ನೇತೃತ್ವದಲ್ಲಿ ಅವರ ಆದೇಶದಂತೆ ಸತ್ಕಾರ್ಯಗಳು ಜರುಗಲಿದೆ ಎಂದು ಹೇಳಿದ್ದಾರೆ.
ಬೃಂದಾವನ ನಿರ್ಮಾಣ ಮಾಡಲು ಒಂದೂವರೆ ವರ್ಷ ಬೇಕಾಗುತ್ತದೆ. ಇದು ತಾತ್ಕಾಲಿಕ ಬೃಂದಾವನ, ಇಲ್ಲಿ ಪ್ರತಿನಿತ್ಯ ಪೂಜೆ ಪುನಸ್ಕಾರಗಳು ನಡೆಯಲಿವೆ ಎಂದು ತಿಳಿಸಿದ್ದಾರೆ.