ನವದೆಹಲಿ, ಡಿ 30(Daijiworld News/PY) : 2018ರ ಜುಲೈ ತಿಂಗಳಲ್ಲಿ ಒಂದೇ ಕುಟುಂಬದ 11 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದ ಮನೆ ಇದೀಗ ಡಯಾಗ್ನೋಸ್ಟಿಕ್ ಸೆಂಟರ್ ಆಗಿ ಮಾರ್ಪಾಡಾಗಿದೆ.
ಈ ವಿಚಾರದ ಬಗ್ಗೆ ಮಾತನಾಡಿದ ಡಯಾಗ್ನೋಸ್ಟಿಕ್ ಸೆಂಟರ್ ಮಾಲಿಕ ಡಾ.ಮೋಹನ್ ಸಿಂಗ್, ನಾನು ಮೂಢನಂಬಿಕೆಗಳನ್ನು ನಂಬುವುದಿಲ್ಲ, ಇಂತಹ ಮೂಢಾಚರಣೆಯ ಮೇಲೆ ನನಗೆ ವಿಶ್ವಾಸವಿಲ್ಲ, ಒಂದು ವೇಳೆ ಇಂತಹ ಮೂಢನಂಬಿಕೆಯ ವಿಚಾರಗಳನ್ನು ನಾನು ನಂಬುತ್ತಿದ್ದರೆ ನಾನ್ಯಾಕೆ ಇಲ್ಲಿಗೆ ಬರುತ್ತಿದ್ದೆ, ಹಾಗಾಗಿದ್ದರೆ ರೋಗಿಗಳು ಕೂಡಾ ಇಲ್ಲಿಗೆ ಪರೀಕ್ಷೆ ಮಾಡಿಸಿಕೊಳ್ಳಲು ಬರುತ್ತಿರಲಿಲ್ಲ, ರೋಗಿಗಳಿಗೆ ಇಲ್ಲಿಗೆ ಬರಲು ಯಾವುದೇ ತೊಂದರೆ ಇಲ್ಲ ಎಂದು ತಿಳಿಸಿದ್ದಾರೆ.
ಈ ಮನೆ ರಸ್ತೆ ಸಮೀಪವೇ ಇರುವುದರಿಂದ ರೋಗಿಗಳಿಗೆ ಆಸ್ಪತ್ರೆಗೆ ಬರಲು ಹತ್ತಿರವಾಗಲಿದೆ. ಈ ಮನೆಯಲ್ಲಿ ನನಗೆ ಯಾವ ತೊಂದರೆಯೂ ಇಲ್ಲ, ನಾನು ಮೂಢನಂಬಿಕೆಯನ್ನು ನಂಬುವ ವ್ಯಕ್ತಿಯಲ್ಲ, ಅಲ್ಲದೇ ಹಿಂದೂ ಪುರೋಹಿತರು ಆಗಮಿಸಿ ದುಷ್ಟ ಶಕ್ತಿಗಳ ನಿವಾರಣೆಗಾಗಿ ಪೂಜೆ ಪುನಸ್ಕಾರ, ಹೋಮ ಮಾಡಿರುವುದಾಗಿ ಡಯಾಗ್ನೋಸ್ಟಿಕ್ ಸೆಂಟರ್ ಮಾಲಿಕ ಹೇಳಿದ್ದಾರೆ ಎಂದು ವರದಿಯೊಂದು ತಿಳಿಸಿದೆ.
ಯಾವುದೇ ಹೊಸ ಕಾರ್ಯವನ್ನು ಪ್ರಾರಂಭಿಸುವ ಮೊದಲು ಗೌರಿ-ಗಣೇಶ ಪೂಜೆ ನಡೆಸುವುದು ವಾಡಿಕೆ, ಆದ್ದರಿಂದ ಆಸ್ಪತ್ರೆಯ ಪ್ರಾರಂಭಕ್ಕೂ ಮೊದಲು ಹೋಮ ನಡೆಸಿದ್ದೇವೆ, ಆದರೆ ನನಗೆ ಈ ಭೂತ, ಪಿಶಾಚಿಗಳ ವಿಚಾರವಾಗಿ ನಂಬಿಕೆಯಿಲ್ಲ ಎಂದು ತಿಳಿಸಿದ್ದಾರೆ.