ನವದೆಹಲಿ, ಡಿ 30(Daijiworld News/PY) : ರಾಷ್ಟ್ರರಾಜಧಾನಿ ಹಾಗೂ ಸುತ್ತಮುತ್ತಲಿನ ನಗರಗಳಲ್ಲಿ ಸೋಮವಾರ ದಟ್ಟ ಮಂಜು ಕವಿದ ವಾತಾವರಣದಿಂದ ರೈಲು ಹಾಗೂ ವಿಮಾನ ಸೇವೆ ವಿಳಂಬವಾಗಿದೆ.
ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕಾಫ್ ಆಗುವ 3 ವಿಮಾನಗಳ ಮಾರ್ಗವನ್ನು ಬದಲಾಯಿಸಲಾಗಿದ್ದು, 30 ರೈಲುಗಳ ಸಂಚಾರದಲ್ಲಿ ವ್ಯತ್ಯಯ ಕಂಡುಬಂದಿದೆ.
ದಟ್ಟ ಮಂಜಿನಿಂದಾಗಿ ಮುಖ್ಯರಸ್ತೆಗಳಲ್ಲಿ ಸಂಚರಿಸುವ ವಾಹನ ಸವಾರರು ಪರದಾಡುವಂತಾಗಿದ್ದು, ಜಾಗರೂಕತೆಯಿಂದ ವಾಹನ ಚಲಾಯಿಸಬೇಕು ಎಂದು ಪ್ರಯಾಣಿಕರೊಬ್ಬರು ತಿಳಿಸಿದ್ದಾರೆ.
ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕ್ಯಾಟ್ 3ಬಿ ವ್ಯವಸ್ಥೆ ಹೊಂದಿರುವ ವಿಮಾನಗಳಲ್ಲಿ ಮಾತ್ರವೇ ಇನ್ಸ್ಟ್ರುಮೆಂಟ್ ಲ್ಯಾಂಡಿಗ್ ಸೌಲಭ್ಯವಿದ್ದು ಲ್ಯಾಂಡಿಂಗ್ ಮಾಡಲಾಗುತ್ತಿದೆ. ವಿಮಾನ ಹಾರಾಟದ ಮಾಹಿತಿಗಾಗಿ ಪ್ರಯಾಣಿಕರಿಗೆ ಸಂಪರ್ಕದಲ್ಲಿರುವಂತೆ ಬೇರೆ ಬೇರೆ ವಿಮಾನಯಾನ ಕಂಪನಿಗಳು ತಿಳಿಸಿವೆ.
ಮುಂದಿನ ಎರಡು ದಿನಗಳವರೆಗೆ ಉತ್ತರ ಭಾರತದಲ್ಲಿ ಚಳಿ ಹೀಗೆಯೇ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು, ಕೇವಲ 50ರಿಂದ 100 ಮೀಟರ್ ಗೋಚರತೆ ಇರುವುದರಿಂದ ಹವಾಮಾನ ಇಲಾಖೆ ದೆಹಲಿಯಲ್ಲಿ ರೆಡ್ ಅಲರ್ಟ್ ಘೋಷಿಸಿದ್ದಾರೆ ಎಂದು ತಿಳಿದುಬಂದಿದೆ.