ಬೆಂಗಳೂರು, ಡಿ 30(Daijiworld News/PY) : "ಯಾರೊಬ್ಬರು ನಾಡದ್ರೋಹದ ಕೆಲಸಕ್ಕೆ ಕೈಹಾಕಬಾರದು. ಗಡಿ ವಿಚಾರದಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ನಮ್ಮ ಸರ್ಕಾರ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ" ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದ್ದಾರೆ.
ವಿಧಾನಸೌಧದ ಆವರಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಮಹಾಜನ್ ಆಯೋಗದ ವರದಿಯು ಯಾವ ಭಾಗವನ್ನು ಯಾವ ರಾಜ್ಯಕ್ಕೆ ನೀಡಬೇಕು ಎಂದು ಸ್ಪಷ್ಟವಾಗಿ ತಿಳಿಸಿದೆ, ಈ ವಿಷಯವಾಗಿ ಯಾವುದೇ ಗೊಂದಲಗಳಿಲ್ಲ, ಕರ್ನಾಟಕ ರಾಜ್ಯದ ಒಂದಿಂಚು ಭೂಮಿ ಕಬಳಿಸಲು ಯಾರಿಗೂ ಅವಕಾಶ ನೀಡುವುದಿಲ್ಲ. ಗಡಿಭಾಗದ ಕನ್ನಡಿಗರು ಆತಂಕ ಪಡಬಾರದು" ಎಂದು ತಿಳಿಸಿದ್ದಾರೆ.
"ರಾಜ್ಯದ ಗಡಿಯಲ್ಲಿ ಶಾಂತಿ ಕಾಪಾಡಲು ಸರ್ಕಾರ ಬದ್ಧವಾಗಿದೆ. ಗಡಿ ವಿಚಾರದಲ್ಲಿ ಶಿವಸೇನೆ ಸೃಷ್ಟಿಸುತ್ತಿರುವ ಗೊಂದಲಗಳಗೆ ಸರಿಯಾದ ರೀತಿಯಲ್ಲಿ ಉತ್ತರ ನೀಡುತ್ತೇವೆ, ಗಡಿ ನಿಗದಿ ವಿಚಾರದಲ್ಲಿ ಮಹಾಜನ್ ವರದಿಯೇ ಅಂತಿಮ. ಇದರಲ್ಲಿ ಯಾವುದೇ ಗೊಂದಲವಿಲ್ಲ" ಎಂದು ತಿಳಿಸಿದ್ದಾರೆ.