ಬೆಂಗಳೂರು, ಡಿ 30(Daijiworld News/PY) : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 12 ಸ್ಥಾಯಿ ಸಮಿತಿಗಳಿಗೆ ಸೋಮವಾರ ನಿಗದಿಯಾಗಿದ್ದ ಚುನಾವಣೆಯು ಮತ್ತೆ ಮುಂದೂಡಿಕೆಯಾಗಿದೆ.
ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಯಾವ ಅಭ್ಯರ್ಥಿಯನ್ನು ಕಣ್ಕಕ್ಕಿಳಿಸಬೇಕು, ಯಾವ ಅಭ್ಯರ್ಥಿಗೆ ಸದಸ್ಯ ಸ್ಥಾನ ಕೊಡಬೇಕು ಎಂಬುದರ ಬಗ್ಗೆ ಭಾನುವಾರ ಸಂಜೆ ಬಿಜೆಪಿ ಕಛೇರಿಯಲ್ಲಿ ಸಭೆ ನಡೆಸಲು ನಿರ್ಧರಿಸಲಾಗಿತ್ತು.
ಆದರೆ, ಪೇಜಾವರ ವಿಶ್ವೇಶತೀರ್ಥ ಶ್ರೀಗಳು ದೈವಾಧೀನರಾದ ಹಿನ್ನೆಲೆ ಭಾನುವಾರ ಸಂಜೆ ನಡೆಯಬೇಕಿದ್ದ ಸಭೆಯನ್ನು ರದ್ದುಗೊಳಿಸಲಾಯಿತು.
ಪೇಜಾವರ ಶ್ರೀಗಳು ದೈವಾಧೀನರಾದ ಹಿನ್ನೆಲೆ ಮೂರು ದಿನಗಳ ಕಾಲ ಶೋಕಾಚರಣೆ ಇರಲಿದೆ. ಆದ್ದರಿಂದ ಚುನಾವಣೆ ನಡೆಸುವುದು ಸೂಕ್ತವಲ್ಲ, ಅಲ್ಲದೇ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನದ ಅಭ್ಯರ್ಥಿಗಳ ಆಯ್ಕೆಯೂ ಸರಿಯಾಗಿ ನಿರ್ಧಾರವಾಗಿಲ್ಲ, ನಮ್ಮ ಪಕ್ಷದ ಸದಸ್ಯರು ಸೋಮವಾರ ನಡೆಯುವ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸುವುದಿಲ್ಲ, ಹಾಗಾಗಿ ಸಭೆ ಮತ್ತೆ ಮುಂದಕ್ಕೆ ಹೋಗಲಿ ಎಂದು ಬಿಜೆಪಿ ಮುಖಂಡರೊಬ್ಬರು ತಿಳಿಸಿದ್ದಾರೆಂದು ವರದಿಯಾಗಿದೆ.