ಲಕ್ನೋ, ಡಿ 30(Daijiworld News/PY) : ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರವು ಗಂಡನಿಂದ ತ್ರಿವಳಿ ತಲಾಖ್ ಪಡೆದ ಮುಸಲ್ಮಾನ ಮಹಿಳೆಯರಿಗೆ ವಾರ್ಷಿಕ 6 ಸಾವಿರ ರೂ. ಪಿಂಚಣಿ ನೀಡುವುದಾಗಿ ಘೋಷಣೆ ಮಾಡಿದ್ದಾರೆ.
ಸಿಎಂ ಯೋಗಿ ಆದಿತ್ಯನಾಥ್ ಅವರ ನಿರ್ಧಾರವನ್ನು ಸ್ವಾಗತಿಸಿ ಮಾತನಾಡಿದ ಶಿಯಾ ಧಾರ್ಮಿಕ ಮುಖಂಡ ಮೌಲಾನಾ ಸೈಫ್ ಅಬ್ಬಾಸ್, "ಈಗ ಸರ್ಕಾರ ತೆಗೆದುಕೊಂಡ ನಿರ್ಧಾರಕ್ಕಿಂತ ಮಕ್ಕಳ ಶಿಕ್ಷಣ, ಮನೆಯ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರ ಯೋಚಿಸಬೇಕು ತ್ರಿವಳಿ ತಲಾಖ್ ಸಂತ್ರಸ್ತ ಮಹಿಳೆಯರಿಗೆ 500 ರೂ. ಪಿಂಚಣಿ ನೀಡುವುದಕ್ಕಿಂತ ಮಕ್ಕಳ ಶಿಕ್ಷಣದತ್ತ ಗಮನಹರಿಸಿದರೆ ಉತ್ತಮವಾಗಿರುತ್ತದೆ" ಎಂದು ತಿಳಿಸಿದ್ದಾರೆ.
ಸರ್ಕಾರದ ನಿರ್ಧಾರದ ಬಗ್ಗೆ ಸುನ್ನಿ ಪಾದ್ರಿ ಮೌಲಾನಾ ಸುಫಿಯಾನಾ ಮಾತನಾಡಿ, "ಈ ವಿಷಯದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ತ್ರಿವಳಿ ತಲಾಖ್ ಪಡೆದ ಮಹಿಳೆಯರಿಗೆ ತಿಂಗಳಿಗೆ 500 ರೂ. ಪಿಂಚಣಿಯಾಗಿ ನೀಡುವ ಮೂಲಕ ಸರ್ಕಾರ ಯಾವ ರೀತಿಯಲ್ಲಿ ನ್ಯಾಯವನ್ನು ನೀಡುತ್ತದೆ ಎಂಬುದನ್ನು ನೋಡಬೇಕು" ಎಂದರು.
ಅಖಿಲ ಭಾರತ ಮುಸ್ಲಿಂ ಮಹಿಳಾ ವೈಯಕ್ತಿಕ ಕಾನೂನು ಮಂಡಳಿಯ ಅಧ್ಯಕ್ಷ ಶಹಿಸ್ಟಾ ಅಂಬರ್, "ಸರ್ಕಾರದ ಈ ನಿರ್ಧಾರ ಉತ್ತಮವಾಗಿದೆ. ಆದರೆ ಮಹಿಳೆಯರಿಗೆ ಕೊಡುವ ಪಿಂಚಣಿ ಹಣದ ಮೊತ್ತ ತುಂಬಾ ಕಡಿಮೆಯಾಗಿದೆ. 6,000 ರೂ. ಪಿಂಚಣಿಯೊಂದಿಗೆ ಮೂಲಭೂತ ಅಗತ್ಯಗಳನ್ನು ಪೂರೈಸಿಕೊಳ್ಳುವುದು ತುಂಬಾ ಕಷ್ಟವಾಗಿರುತ್ತದೆ" ಎಂದು ಹೇಳಿದ್ದಾರೆ.