ಬೆಂಗಳೂರು, ಡಿ 30 (Daijiworld News/ MB) : ಮುಖ್ಯಮಂತ್ರಿಯಾದ ನಂತರ ಬಿ.ಎಸ್ ಯಡಿಯೂರಪ್ಪ ಮೊದಲ ಬಾರಿಗೆ ವಿದೇಶ ಪ್ರವಾಸ ಮಾಡಲಿದ್ದು ಜನವರಿಯಲ್ಲಿ ಕೇಂದ್ರ ಸರ್ಕಾರದ ಅಧಿಕೃತ ಆಹ್ವಾನದ ಮೇರೆಗೆ ಸ್ವಿಝರ್ ಲ್ಯಾಂಡ್ ದೇಶಕ್ಕೆ ಜನವರಿ 21ರಿಂದ 25ರವರೆಗೆ 5 ದಿನಗಳ ಕಾಲ ಪ್ರವಾಸಕ್ಕೆ ಹೋಗುತ್ತಿದ್ದಾರೆ.
ಈ ಪ್ರವಾಸಕ್ಕೆ ಮುಖ್ಯಮಂತ್ರಿಯವರು ಈಗಾಗಲೇ ಸಿದ್ಧತೆ ನಡೆಸುತ್ತಿದ್ದು, ಜನವರಿ ತಿಂಗಳು ಚಳಿ ಹೆಚ್ಚಾಗಿರುವ ಹಿನ್ನಲೆಯಲ್ಲಿ ತಲೆಗೆ ಟೋಪಿ, ಸ್ವೆಟರ್, ಜಾಕೆಟ್, ಕೈ ಕಾಲುಗಳಿಗೆ ಗ್ಲೌಸ್ ಹಾಗೂ ಬೆಚ್ಚನೆಯ ಉಡುಪಗಳನ್ನು ಖರೀದಿಸಲಾಗಿದೆ.
ವಿಶ್ವ ಆರ್ಥಿಕ ವೇದಿಕೆ ವಾರ್ಷಿಕ ಸಭೆಯು ಸ್ವಿಝರ್ ಲ್ಯಾಂಡ್ನ ಡಾವೋಸ್ ನಲ್ಲಿ ಜರುಗಲಿದ್ದು ಕೇಂದ್ರ ಸರ್ಕಾರದ ಸಚಿವರ ಜೊತೆಯಲ್ಲಿ ಮಧ್ಯಪ್ರದೇಶ, ಪಂಜಾಬ್ ಮತ್ತು ಕರ್ನಾಟಕ ರಾಜ್ಯಗಳ ಮುಖ್ಯಮಂತ್ರಿಗಳನ್ನು ಸಭೆಗೆ ಆಹ್ವಾನ ಮಾಡಲಾಗಿದೆ. ಹಾಗೆಯೇ ಈ ಸಭೆಯಲ್ಲಿ 100ಕ್ಕೂ ಅಧಿಕ ಕಂಪನಿಗಳ ಸಿಇಒಗಳು ಕೂಡ ಭಾಗವಹಿಸಲಿದ್ದಾರೆ.