ಬೆಂಗಳೂರು, ಡಿ 30 (Daijiworld News/ PY): ಜನವರಿ 20ರಂದು ವಿಧಾನಮಂಡಲ ಜಂಟಿ ಅಧಿವೇಶನವನ್ನು ಮಾಡಲು ನಿರ್ಧರಿಸಿ ಮುಂದೂಡಲಾದ ವಿಧಾನಮಂಡಲ ಜಂಟಿ ಅಧಿವೇಶನವನ್ನು ಫೆಬ್ರವರಿ 17ರಂದು ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.
ಇಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಫೆಬ್ರವರಿ 17ರಂದು ವಿಧಾನಮಂಡಲ ಜಂಟಿ ಅಧಿವೇಶನವನ್ನು ನಡೆಸಲಾಗುವುದು ಎಂದು ನಿರ್ಧರಿಸಲಾಗಿದೆ.
ಸಂಪುಟ ಸಭೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಮಾಧುಸ್ವಾಮಿ ಅವರು, "ವಿಧಾನಮಂಡಲ ಜಂಟಿ ಅಧಿವೇಶನವನ್ನು ಮೊದಲು 2020ರ ಜನವರಿ 20 ರಿಂದ 30 ರವರೆಗೆ ನಡೆಸಲು ನಿರ್ಧರಿಸಲಾಗಿತ್ತು, ಬಳಿಕ ಅಧಿವೇಶನವನ್ನು ಮುಂದೂಡಲಾಯಿತು" ಎಂದು ತಿಳಿಸಿದರು.
"ಮುಂದೂಡಲಾದ ಅಧೀವೇಶನವು ಫೆ. 17ರಿಂದ 21ರವರೆಗೆ ನಡೆಯಲಿದ್ದು, ಫೆ.17ರಂದು ನಡೆಯಲಿರುವ ಜಂಟಿ ಸದನದಲ್ಲಿ ರಾಜ್ಯಪಾಲ ವಜೂಭಾಯಿ ವಾಲ ಅವರು ಭಾಷಣ ಮಾಡಲಿದ್ದಾರೆ. ಮಾರ್ಚ್ 2ರಿಂದ ಬಜೆಟ್ ಅಧಿವೇಶನ ಪ್ರಾರಂಭವಾಗಲಿದ್ದು, ಮಾರ್ಚ್ 5ರಂದು ಹಣಕಾಸು ಇಲಾಖೆಯ ಜವಾಬ್ದಾರಿ ಹೊಂದಿರುವ ಸಿಎಂ ಯಡಿಯೂರಪ್ಪ ಅವರು ಬಜೆಟ್ ಮಂಡಿಸಲಿದ್ದಾರೆ" ಎಂದು ತಿಳಿಸಿದರು.