ನವದೆಹಲಿ, ಡಿ 30 (Daijiworld News/ PY): ಸಾರ್ವಜನಿಕ ಆಸ್ತಿ ಹಾನಿ ಮಾಡುವವರ ಆಸ್ತಿ ಜಪ್ತಿ ಮಾಡಲಾಗುವುದು ಎಂದು ಯೋಗಿ ಆದಿತ್ಯನಾಥ್ ಅವರು ಎಚ್ಚರಿಸಿದ ಬೆನ್ನಲ್ಲೇ, ದೇಶದಲ್ಲಿ ಹಿಂಸಾಚಾರ ಅಥವಾ ಸೇಡಿಗೆ ಜಾಗವಿಲ್ಲ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.
ನವದೆಹಲಿಯಲ್ಲಿ ಇಂದು ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಪ್ರಿಯಾಂಕಾ ಗಾಂಧಿ, "ಉತ್ತರ ಪ್ರದೇಶದಲ್ಲಿ ಎನ್ಆರ್ಸಿ ಹಾಗೂ ಸಿಎಎ ವಿರುದ್ಧ ನಡೆದ ಪ್ರತಿಭಟನೆ ವೇಳೆ ಪೊಲೀಸರು ಜನರ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿದ್ದಾರೆ" ಎಂದು ತಿಳಿಸಿದ್ದಾರೆ.
ಎನ್ಆರ್ಸಿ ಹಾಗೂ ಸಿಎಎ ವಿರುದ್ಧ ನಡೆದ ಪ್ರತಿಭಟನೆ ವೇಳೆ ಉತ್ತರ ಪ್ರದೇಶ ಪೊಲೀಸರ ಕ್ರಮವನ್ನು ಖಂಡಿಸಿರುವ ಪ್ರಿಯಾಂಕಾ, "ನನ್ನ ಸುರಕ್ಷತೆ ಮುಖ್ಯ ಸಮಸ್ಯೆ ಅಲ್ಲ. ನಾವು ಸಾಮಾನ್ಯ ನಾಗರಿಕರ ಸುರಕ್ಷತೆ ಬಗ್ಗೆ ಮಾತನಾಡುತ್ತಿದ್ದೇವೆ. ನಮಗೆ ತಿಳಿದಿರುವ ಹಾಗೆ 5500 ಜನರನ್ನು ಬಂಧಿಸಲಾಗಿದೆ. ಹಲವರನ್ನು ಜೈಲಿಗೆ ತಳ್ಳಿ ಕೆಟ್ಟ ರೀತಿಯಲ್ಲಿ ನಡೆಸಿಕೊಳ್ಳಲಾಗಿದೆ. ಉತ್ತರ ಪ್ರದೇಶ ಪೊಲೀಸರು ಮತ್ತು ಅಲ್ಲಿನ ಆಡಳಿತ ತಪ್ಪು ಕಾರ್ಯಗಳಲ್ಲಿ ನಿರತವಾಗಿದೆ" ಎಂದು ತಿಳಿಸಿದ್ದಾರೆ.
ಎರಡು ದಿನಗಳ ಹಿಂದೆ ತಮ್ಮ ಮೇಲೆ ಉತ್ತರ ಪ್ರದೇಶ ಪೊಲೀಸರು ಹಲ್ಲೆ ಮಾಡಿದ್ದಾರೆಂದು ಗಂಭೀರ ಆರೋಪ ಮಾಡಿದ್ದ ಪ್ರಿಯಾಂಕಾ, "ಈ ದೇಶದಲ್ಲಿ ವೈರತ್ವ, ಹಿಂಸೆ ಹಾಗೂ ಸೇಡಿಗೆ ಜಾಗವಿಲ್ಲ" ಎಂದು ಹೇಳಿದ್ದಾರೆ.