ಮೈಸೂರು, ಡಿ 30 (Daijiworld News/ PY): ಹೊಸವರ್ಷದ ಸಂಭ್ರಮಾಚರಣೆಯ ಸಲುವಾಗಿ ಚಾಮುಂಡಿಬೆಟ್ಟದಲ್ಲಿ ಡಿ.31ರ ಸಂಜೆ ಗಂಟೆ 7ರಿಂದ ಜ.1ರ ಬೆಳಿಗ್ಗೆ 6ಗಂಟೆಯವರೆಗೆ ಸಂಚಾರಕ್ಕೆ ಅವಕಾಶವಿಲ್ಲ ಎಂದು ತಿಳಿದುಬಂದಿದೆ.
ಚಾಮುಂಡಿಬೆಟ್ಟದ ಬಳಿ ಇರುವ ಗೇಟ್ ಹಾಗೂ ಉತ್ತನಹಳ್ಳಿಗೇಟ್, ದೈವಿವನ ಗೇಟ್, ಲಲಿತಮಹಲ್ ಗೇಟ್ಗಳಲ್ಲಿ ಹೊಸವರ್ಷದ ವೇಳೆ ಪ್ರವೇಶವಿರುವುದಿಲ್ಲ, ತಾವರೆಕಟ್ಟೆ ಗೇಟ್ನಲ್ಲಿ ಮಾತ್ರ ಚಾಮುಂಡಿಬೆಟ್ಟದ ನಿವಾಸಿಗಳಿಗೆ ಪ್ರವೇಶಿಸಲು ಅವಕಾಶವಿದೆ. ಬೆಟ್ಟದ ತಪ್ಪಲಿನಲ್ಲಿ ಹಾಗೂ ಬೆಟ್ಟದಲ್ಲಿ ಹೊಸವರ್ಷದ ದಿನ ಸಂಭ್ರಮಾಚರಣೆ ಮಾಡಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ನಗರ ಪೊಲೀಸ್ ಕಮೀಷನರ್ ಕೆ.ಟಿ ಬಾಲಕೃಷ್ಣ ತಿಳಿಸಿದ್ದಾರೆ.
ನಗರದ ಎಲ್ಲಾ ರೆಸ್ಟೋರೆಂಟ್, ಕ್ಲಬ್, ರೆಸಾರ್ಟ್, ಹೊಟೇಲ್, ಹೋಂ ಸ್ಟೇ, ಅಪಾರ್ಟ್ಮೆಂಟ್, ಸರ್ವೀಸ್ ಅಪಾರ್ಟ್ಮೆಂಟ್, ಮಾಲ್ಸ್, ಸಂಘ-ಸಂಸ್ಥೆಗಳಲ್ಲಿ 1ಗಂಟೆಯೊಳಗಾಗಿ ಒಳಾವರಣದಲ್ಲಿ ಮಾತ್ರ ಸಂಭ್ರಮಾಚರಣೆಯನ್ನು ಮಾಡಬೇಕು, ಅಲ್ಲದೇ ನಿಗದಿಪಡಿಸಿದ ಸಮಯಕ್ಕಿಂತ ಹೆಚ್ಚು ಮಧ್ಯ ವ್ಯಾಪಾರ ಮಾಡಲು ಅಬಕಾರಿ ಹಾಗೂ ಪೊಲೀಸ್ ಇಲಾಖೆಯಿಂದ ಲಿಖಿತವಾಗಿ ಅನುಮತಿ ಪಡೆಯಬೇಕು ಎಂದು ತಿಳಿಸಿದ್ದಾರೆ.
ಹೊಸವರ್ಷದ ಸಂಭ್ರಮಾಚರಣೆಯ ಕಾರಣದಿಂದಾಗಿ ರಸ್ತೆಯಲ್ಲಿ ಮಧ್ಯಪಾನ ಮಾಡುವುದು, ರಸ್ತೆಗಳಲ್ಲಿ ಅಸಭ್ಯವಾಗಿ ವರ್ತಿಸುವವರ ವಿರುದ್ದ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು, ಖಾಸಗಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸಂಭ್ರಮಾಚರಣೆ ಮಾಡುವವರು, ಧ್ವನಿವರ್ಧಕಗಳನ್ನು ಬಳಸಲು ಪೊಲೀಸರಿಂದ ಕಡ್ಡಾಯವಾಗಿ ಅನುಮತಿ ಪಡೆದಿರಲೇಬೇಕು ಎಂದು ಪೊಲೀಸ್ ಕಮೀಷನರ್ ತಿಳಿಸಿದ್ದಾರೆ.