ನವದೆಹಲಿ, ಡಿ 31 (Daijiworld News/MB): ಭೂಸೇನಾ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಮನೋಜ್ ಮುಕುಂದ್ ನರವಾಣೆ ಅವರು ಮಂಗಳವಾರ ಅಧಿಕಾರ ವಹಿಸಿಕೊಳ್ಳುತ್ತಾರೆ.
59ರ ಹರೆಯದ ಲೆಫ್ಟಿನೆಂಟ್ ಜನರಲ್ ನರವಾಣೆ ಅವರು ಸೇನೆಯ ಉಪ ಮುಖ್ಯಸ್ಥರಾಗುವ ಮೊದಲು ಕೊಲ್ಕತ್ತಾದಲ್ಲಿ ಪ್ರಧಾನ ಕಚೇರಿಯಿರುವ ಭೂಸೇನೆಯ ಪೂರ್ವ ಕಮಾಂಡ್ನ ಕಮಾಂಡರ್ ಆಗಿದ್ದರು.
ಜಮ್ಮು ಮತ್ತು ಕಾಶ್ಮೀರ ಹಾಗೂ ಈಶಾನ್ಯ ರಾಜ್ಯಗಳಲ್ಲಿ ನುಸುಳುಕೋರರ ವಿರುದ್ಧದ ಕಾರ್ಯಾಚರಣೆಗಳ ತಂತ್ರದ ರೂವಾರಿಯಾಗಿ ಕಾರ್ಯನಿರ್ವಹಿಸಿದ್ದರು. ಹಾಗೆಯೇ ಇವರು ಹತ್ತು ವರ್ಷ ಸೇವೆ ಸಲ್ಲಿಸಿದ್ದು ಹಲವು ಉನ್ನತ ಹುದ್ದೆಗಳನ್ನು ನಿರ್ವಹಣೆ ಮಾಡಿದ್ದಾರೆ.
ಇವರು ಜೂನ್ 1980ರಲ್ಲಿ ಸಿಖ್ ರೆಜಿಮೆಂಟ್ನಲ್ಲಿ ಕೆಲಸ ಆರಂಭಿಸಿದ್ದು ಶಾಂತಿಪಾಲನಾ ಪಡೆಯೊಂದಿಗೆ ಶ್ರೀಲಂಕಾದಲ್ಲೂ ಕಾರ್ಯನಿರ್ವಹಿಸಿದ್ದಾರೆ. ಕೆಲ ಕಾಲ ಮ್ಯಾನ್ಮಾರ್ನಲ್ಲಿಯೂ ಕಾರ್ಯನಿರ್ವಹಿಸಿದ್ದರು.
ನರವಾಣೆ ಅವರಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಅತ್ಯುತ್ತಮ ಬೆಟಾಲಿಯನ್ ನಿರ್ವಹಣೆಗಾಗಿ ಸೇನಾ ಪದಕ, ನಾಗಾಲ್ಯಾಂಡ್ನಲ್ಲಿ ಅಸ್ಸಾಂ ರೈಫಲ್ಸ್ನ ಇನ್ಸ್ಪೆಕ್ಟರ್ ಜನರಲ್ ಆಗಿ ಸಲ್ಲಿಸಿದ ಸೇವೆಗೆ ವಿಶಿಷ್ಟ ಸೇವಾ ಪದಕ, ಸ್ಟ್ರೈಕ್ ಕಾರ್ಪ್ಸ್ ಮುನ್ನಡೆಸಿದ್ದಕ್ಕಾಗಿ ಅತಿ ವಿಶಿಷ್ಟ ಸೇವಾ ಪದಕ ಲಭಿಸಿದೆ.
ಭೂಸೇನಾ ಮುಖ್ಯಸ್ಥ ಹುದ್ದೆಯಿಂದ ನಿವೃತ್ತಿಯಾಗಲಿರುವ ಜ. ಬಿಪಿನ್ ರಾವತ್ ರಕ್ಷಣಾ ಪಡೆಗಳ ಮುಖ್ಯಸ್ಥರಾಗಿ (ಸಿಡಿಎಸ್) ನೇಮಕಗೊಂಡಿದ್ದಾರೆ.