ರಾಮನಗರ, ಡಿ 31 (Daijiworld News/MB) : ಕನಕಪುರ ತಹಶೀಲ್ದಾರ್ ಆನಂದಯ್ಯ ಅವರನ್ನು ದಿಢೀರ್ ವರ್ಗಾವಣೆ ಮಾಡಿ ಸರಕಾರ ಆದೇಶ ಹೊರಡಿಸಿದೆ.
ಕಾಂಗ್ರೆಸ್ ನಾಯಕ ಡಿ ಕೆ ಶಿವಕುಮಾರ್ ಅವರು ಕನಕಪುರ ಕಪಾಲಿ ಬೆಟ್ಟದಲ್ಲಿ ಯೇಸು ಪ್ರತಿಮೆ ನಿರ್ಮಾಣ ಮಾಡಲು ಶಂಕು ಸ್ಥಾಪನೆ ಮಾಡಿದ ಬಳಿಕ ತೀವ್ರ ವಿರೋಧವಾಗಿದ್ದು ಈ ಸಂದರ್ಭದಲ್ಲೇ ತಹಶೀಲ್ದಾರ್ ವರ್ಗಾವಣೆಯಾಗಿರುವುದು ಅನುಮಾನಕ್ಕೆ ಕಾರಣವಾಗಿದೆ.
ಕನಕಪುರದ ಹೊಸ ತಹಶೀಲ್ದಾರ್ ಆಗಿ ಈ ಮೊದಲು ಯಳಂದೂರು ತಹಶೀಲ್ದಾರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ವರ್ಷಾ ಅವರನ್ನು ಆಯ್ಕೆ ಮಾಡಲಾಗಿದೆ.
ಈ ಆದೇಶವನ್ನು ಕಂದಾಯ ಇಲಾಖೆ ಅಧೀನ ಕಾರ್ಯದರ್ಶಿ ಆರ್. ಉಮಾದೇವಿ ನೀಡಿದ್ದು ವರ್ಗಾವಣೆಯಾದ ಆನಂದಯ್ಯ ಅವರಿಗೆ ಬೇರೆ ಯಾವುದೇ ಜಾಗ ನಿರ್ಧಾರ ಮಾಡಿಲ್ಲ.
ಡಿ ಕೆ ಶಿವಕುಮಾರ್ ಕಪಾಲಿ ಬೆಟ್ಟದಲ್ಲಿ ಯೇಸು ಪ್ರತಿಮೆ ನಿರ್ಮಾಣ ಮಾಡಲು ಶಂಕು ಸ್ಥಾಪನೆ ಮಾಡಿದ್ದು ಆ ಬಳಿಕ ಈ ವಿಷಯ ವಿವಾದಕ್ಕೆ ಕಾರಣವಾಗಿತ್ತು. ಹಲವರು ಯೇಸು ಪ್ರತಿಮೆ ನಿರ್ಮಾಣವನ್ನು ವಿರೋಧ ಮಾಡಿ ಇದು ಸೋನಿಯಾ ಗಾಂಧಿಯವರನ್ನು ಮೆಚ್ಚಿಸಲು ಮಾಡಿರುವಂತದ್ದು ಎಂದು ದೂರಿದ್ದರು.
ಹಾಗೆಯೇ ಕಪಾಲಿ ಬೆಟ್ಟ ಅಭಿವೃದ್ದಿ ಸಮಿತಿಗೆ ಮಂಜೂರಾಗಿದ್ದ 10 ಎಕರೆ ಜಾಗವನ್ನು ಯೇಸು ಪ್ರತಿಮೆಗೆ ಬಳಸಲಾಗಿದೆ ಎಂದು ಈ ಸ್ಥಳದಲ್ಲಿ ಯೇಸು ಪ್ರತಿಮೆ ನಿರ್ಮಾಣ ಮಾಡಬಾರದು ಎಂದು ವಿರೋಧ ಮಾಡಲಾಗಿತ್ತು. ಈ ಕುರಿತು ತನಿಖೆ ನಡೆಸುವಂತೆ ರಾಮನಗರ ಜಿಲ್ಲಾಧಿಕಾರಿಗೆ ಸೂಚಿನೆ ಮಾಡಲಾಗಿದೆ.