ಬೆಂಗಳೂರು, ಡಿ 31 (Daijiworld News/MB) : ವಿದೇಶಗಳಿಂದ ಮಾದಕ ವಸ್ತುಗಳನ್ನು ಅಮದು ಮಾಡಿಕೊಂಡು ನಗರದಲ್ಲಿ ಸರಬರಾಜು ಮಾಡುತ್ತಿದ್ದ ಭಾರತೀಯ ಅಂಚೆ ಇಲಾಖೆ ನೌಕರರ ತಂಡವೊಂದನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಅಂಚೆ ಇಲಾಖೆಯಲ್ಲಿ ಪೋಸ್ಟಲ್ ಅಸಿಸ್ಟೆಂಟ್ ಆಗಿದ್ದ ರಮೇಶ್ ಕುಮಾರ್ (47), ಎಂಟಿಎಸ್ ಸಿಬ್ಬಂದಿಗಳಾಗಿದ್ದ ಶ್ರೀರಾಮಪುರದ ಎಚ್.ಸುಬ್ಬ (34), ಆರ್ಟಿ ನಗರದ ಸೈಯದ್ ಮಜೀದ್(54) ಹಾಗೂ ನಾಗವಾರದ ವಿಜಯ ರಾಜನ್ (58) ಬಂಧಿತ ಆರೋಪಿಗಳು.
ಬಂಧಿತರು ಇಲ್ಲಿನ ರಾಜಭವನ ರಸ್ತೆಯಲ್ಲಿನ ಜಿಪಿಒ ಕಚೇರಿಯಿಂದ ಇತ್ತೀಚಿಗಷ್ಟೇ, ಚಾಮರಾಜಪೇಟೆಗೆ ವರ್ಗಾವಣೆಗೊಂಡಿದ್ದ ಫಾರಿನರ್ಸ್ ಪೋಸ್ಟ್ ವಿಭಾಗದ ನೌಕರರಾಗಿದ್ದು ವಿಚಾರಣೆ ನಡೆಸಿದಾಗ ಡ್ರಕ್ಸ್ ದಂಧೆಕೋರರೊಂದಿಗೆ ಶಾಮೀಲಾಗಿ ನಕಲಿ ವಿಲಾಸಗಳನ್ನು ನಮೂದಿಸಿ ಮಾದಕ ವಸ್ತುಗಳನ್ನು ವಿದೇಶಗಳಿಂದ ಆಮದು ಮಾಡಿಕೊಂಡಿದ್ದ ಚೀಲಗಳನ್ನು ಮಾದಕ ವ್ಯಸನಿಗಳಿಗೆ ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ನೆದರ್ಲ್ಯಾಂಡ್ನಿಂದ ಬಿಟ್ಕಾಯಿನ್ ಮೂಲಕ ಮಾದಕ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತಿದ್ದ ಆರೋಪಿಗಳನ್ನು ವಿಚಾರಣೆ ಮಾಡಿದಾಗ ಈ ದಂದೆಯಲ್ಲಿ ಅಂಚೆ ವ್ಯಾಪಾರಿಗಳು ಶಾಮೀಲಾಗಿರುವುದು ಬೆಳಕಿಗೆ ಬಂದಿದೆ.
ಅಷ್ಟು ಮಾತ್ರವಲ್ಲದೇ ಈ ಆರೋಪಿಗಳು ನೆದರ್ಲ್ಯಾಂಡ್, ಅಮೆರಿಕಾ, ಡೆನ್ಮಾರ್ಕ್ ಸೇರಿದಂತೆ ವಿದೇಶಗಳಿಂದ ತರಿಸಿಕೊಳ್ಳುತ್ತಿದ್ದ ಮಾದಕ ದ್ರವ್ಯಗಳನ್ನು ಪರೀಶಿಲನೆ ಮಾಡುತ್ತಿದ್ದ ಅವರು, ಸಕ್ಷಮ ಅಧಿಕಾರಿಗಳಿಗೆ ತಿಳಿಸದೆ, ಡ್ರಗ್ ಪೆಡ್ಲರ್ಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡಿ ಹಣ ಸರಬರಾಜು ಮಾಡುತ್ತಿದ್ದರು ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.
ಬಂಧಿತರಿಂದ ಪೊಲೀಸರು 20 ಲಕ್ಷ ಮೌಲ್ಯದ 339 ಎಕ್ಸಟೀನ್ಸಿ ಮಾತ್ರೆಗಳು, 10 ಗ್ರಾಂ ತೂಕದ ಎಂಡಿಎಂಎ ಕ್ರಿಸ್ಟೇಲ್, 30 ಗ್ರಾಂ ಬ್ರೌನ್ ಶುಗರ್ ಹಾಗೂ ವಿದೀಶಗಳಿಂದ ಬಂದಿದ್ದ ಪೋಸ್ಟ್ ಕವರ್ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಸಿಸಿಬಿ ಅಧಿಕಾರಿಗಳ ತಂಡಕ್ಕೆ ೫೦ ಸಾವಿರ ರೂಪಾಯಿ ಬಹುಮಾನ ನೀಡಲಾಗುವುದು ಎಂದು ಭಾಸ್ಕರ್ ರಾವ್ ಅವರು ತಿಳಿಸಿದ್ದಾರೆ.