ತಿರುವನಂತಪುರ, ಡಿ 31 (Daijiworld News/PY) : ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ವಿಧಾನಸಭೆಯಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನೂತನ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಿರ್ಣಯವೊಂದನ್ನು ಮಂಡಿಸಿದ್ದಾರೆ.
ನೂತನ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದ್ದಾರೆ.
ಪೌರತ್ವ ಕಾಯ್ದೆಯು ಜನರ ನಡುವೆ ಭಿನ್ನತೆಯನ್ನುಂಟುಮಾಡುತ್ತಿದೆ, ಇದರಿಂದ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ, ಪೌರತ್ವ ತಿದ್ದುಪಡಿ ಕಾಯ್ದೆಯು ಸಂವಿಧಾನದ ಮೌಲ್ಯಗಳನ್ನು ಹೊಂದಿಲ್ಲ, ಸಂವಿಧಾನವು ಮತ ಸೌಹಾರ್ದತೆಗೆ ಪ್ರಾಧಾನ್ಯ ನೀಡುತ್ತಿದೆ, ಪೌರತ್ವ ತಿದ್ದುಪಡಿ ಕಾಯ್ದೆ ಸಂವಿಧಾನದ ಮೂಲ ಸತ್ವವನ್ನು ಹೊಂದಿಲ್ಲ, ಯಾವುದೇ ಬಂಧನ ಕೇಂದ್ರಗಳು ಕೇರಳದಲ್ಲಿ ಇಲ್ಲ ಎಂದು ಪಿಣರಾಯಿ ತಿಳಿಸಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ದ ಅವಿಶ್ವಾಸ ನಿರ್ಣಯಕ್ಕೆ ಬಿಜೆಪಿ ಶಾಸಕ ಒ.ರಾಜಗೋಪಾಲ್ ವಿರೋಧ ಸೂಚಿಸಿದ್ದು, ಅವಿಶ್ವಾಸ ನಿರ್ಣಯ ಸಂವಿಧಾನ ವಿರೋಧಿ ಎಂದಿದ್ದಾರೆ. ಪರಿಶಿಷ್ಟವರ್ಗ ಹಾಗೂ ಪರಿಶಿಷ್ಟ ಜಾತಿ ಮೀಸಲಾತಿಗೆ ಸಂಬಂಧಪಟ್ಟ ಗೊತ್ತುವಳಿಯನ್ನು ವಿಧಾನಸಭಾ ಸದಸ್ಯರು ಒಮ್ಮತದಿಂದ ಅಂಗೀಕರಿಸಿದ್ದಾರೆ.
ಅವಿಶ್ವಾಸ ನಿರ್ಣಯಕ್ಕೆ ವಿಧಾನಸಭೆ ಅಂಗೀಕಾರ ನೀಡಿದ ಬಳಿಕ ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಲಾಗುತ್ತದೆ, ಆಡಳಿತರೂಢ ಪಕ್ಷ ಹಾಗೂ ವಿಪಕ್ಷ ಸಮಾನ ನಿಲುವು ಹೊಂದಿರುವುದರಿಂದ ಅವಿಶ್ವಾಸ ನಿರ್ಣಯಕ್ಕೆ ವಿಧಾನಸಭೆ ಅಂಗೀಕಾರ ನೀಡಿದ್ದೇ ಆದಲ್ಲಿ ತಾವು ರಾಷ್ಟ್ರಪತಿ ಮೊರೆ ಹೋಗುವುದಾಗಿ ಬಿಜೆಪಿ ತಿಳಿಸಿದೆ.