ಲಕ್ನೋ, ಡಿ 31 (Daijiworld News/PY) : ಅಯೋಧ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ಪ್ರಕಾರ ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣಕ್ಕೆ ಯೋಗ್ಯವಾದ 5 ಸ್ಥಳಗಳನ್ನು ಉತ್ತರಪ್ರದೇಶ ಸರ್ಕಾರ ಗುರುತಿಸಿದೆ.
ಬಾಬ್ರಿ ಮಸೀದ ಇದ್ದ ಸ್ಥಳ ಶ್ರೀರಾಮನ ಜನ್ಮಸ್ಥಳವಾಗಿದೆ ಎಂಬುದು ಹಿಂದುಗಳ ನಂಬಿಕೆ. ರಾಮ ಜನ್ಮ ಭೂಮಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ಆಧಾರದಂತೆ ಮಸೀದಿ ನಿರ್ಮಾಣಕ್ಕೆ 5 ಎಕರೆ ಭೂಮಿಯನ್ನು ನೀಡಬೇಕಾಗಿ ಸುಪ್ರೀಂಕೋರ್ಟ್ ಆದೇಶಿಸಿತ್ತು.
ಸುಪ್ರೀಂಕೋರ್ಟ್ ನೀಡಿದ ತೀರ್ಪಿನಂತೆ ಉತ್ತರಪ್ರದೇಶ ಸರ್ಕಾರ ಮಿರ್ಜಾಪುರ್, ಶಂಶುದ್ದೀನ್ ಪುರ್ ಮತ್ತು ಚಾಂದ್ ಪುರ್ನಲ್ಲಿ ಐದು ಸ್ಥಳಗಳನ್ನು ಗುರುತಿಸಿದ್ದು, ಈ ಪ್ರದೇಶ ಪವಿತ್ರ ಸ್ಥಳ ಎಂದು ಗುರುತಿಸಿರುವ ಪಂಚ್ ಕೋಶಿ ಪರಿಕ್ರಮದಿಂದ ಸುಮಾರು 15 ಕಿಲೋ ಮೀಟರ್ ದೂರದಲ್ಲಿದೆ ಎಂದು ವರದಿ ತಿಳಿಸಿದೆ.
ಸುಪ್ರೀಂಕೋರ್ಟ್ ಆದೇಶದಂತೆ ಸುನ್ನಿ ವಕ್ಫ್ ಬೋರ್ಡ್ ಟ್ರಸ್ಟಿಗಳು 5 ಸ್ಥಳಗಳನ್ನು ಪರಿಶೀಲಿಸಿ ಮಸೀದಿ ನಿರ್ಮಾಣಕ್ಕೆ ಯಾವ ಸ್ಥಳ ಸೂಕ್ತ ಎಂಬುದನ್ನು ತಿಳಿಸಲಿ ಎಂದು ಉತ್ತರಪ್ರದೇಶ ಸರ್ಕಾರ ಸೂಚನೆ ನೀಡಿರುವುದಾಗಿ ವರದಿ ತಿಳಿಸಿದೆ. ಅಯೋಧ್ಯೆ-ಬಾಬರಿ ಮಸೀದಿ ಕುರಿತು ಸುಪ್ರೀಂಕೋರ್ಟ್ ಐವರು ನ್ಯಾಯಾಧೀಶರ ಪೀಠ ನೀಡಿದ್ದ ತೀರ್ಪನ್ನು ಮರುಪರಿಶೀಲಿಸಬೇಕೆಂದು ಕೋರಿ ಸಲ್ಲಿಸಲಾಗಿದ್ದ 18 ಅರ್ಜಿಗಳನ್ನು ಕಳೆದ ಡಿಸೆಂಬರ್ 12ರಂದು ನ್ಯಾಯಾಲಯ ವಜಾಮಾಡಲಾಗಿತ್ತು.