ಬೆಂಗಳೂರು, ಡಿ 31 (Daijiworld News/PY) : 'ಪಕ್ಷದ ಮಟ್ಟದಲ್ಲಾಗಲಿ ಸರ್ಕಾರದ ಮಟ್ಟದಲ್ಲಾಗಲಿ ಡಿಸಿಎಂ ಹುದ್ದೆ ರದ್ದು ಮಾಡುವ ಬಗ್ಗೆ ಪ್ರಸ್ತಾಪ ಇಲ್ಲ. ಆದರೆ ಈ ಬಗ್ಗೆ ರಸ್ತೆ ಮೇಲೆ ಚರ್ಚೆಯಾಗುವ ಬದಲು ಪಕ್ಷದ ವೇದಿಕೆಯಲ್ಲಿ ಇಂಥ ವಿಚಾರಗಳು ಚರ್ಚೆಯಾದರೆ ಅದಕ್ಕೊಂದು ಗೌರವ' ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಡಿಸಿಎಂ ಗೋವಿಂದ ಕಾರಜೋಳ ಅವರು, 'ಡಿಸಿಎಂ ಹುದ್ದೆ ರದ್ದು ಮಾಡುವ ಬಗ್ಗೆ ರಾಷ್ಟ್ರ ಮಟ್ಟದ ನಾಯಕರು ಹಾಗೂ ಸಿಎಂ ಜೊತೆ ಚರ್ಚಿಸಿದ್ರೆ ಅದಕ್ಕೆ ಗೌರವ ಇದೆ. ಆದರೆ ಈ ಬಗ್ಗೆ ರಸ್ತೆಯಲ್ಲೆ ಚರ್ಚೆ ನಡೆಸಿದರೆ ಅದಕ್ಕೆ ಯಾವುದೇ ರೀತಿಯಾದ ಗೌರವ ಇಲ್ಲ, ಈ ಚರ್ಚೆಯ ಬಗ್ಗೆ ಯಾರ ಅಭಿಪ್ರಾಯಕ್ಕೆ ಮಹತ್ವ ಕೊಡಬೇಕು ಯಾರ ಅಭಿಪ್ರಾಯ ಮಹತ್ವ ಕೊಡಬಾರದು ಎಂಬುದು ನನಗೆ ತಿಳಿದಿದೆ' ಎಂದು ಹೇಳಿದ್ದಾರೆ.
'ಪಕ್ಷ ನೀಡಿದ ಯಾವುದೇ ಸೂಚನೆಯನ್ನು ನಾನು ಪಾಲಿಸುತ್ತೇನೆ, ಪಕ್ಷ ಸೂಚಿಸಿದ ಯಾವುದೇ ನಿರ್ದೇಶನ ಪಾಲಿಸುವುದು ನನ್ನ ಕರ್ತವ್ಯ, ನಾನಂತೂ ಪಕ್ಷದ ಶಿಸ್ತಿನ ಸಿಪಾಯಿ. ಸಿಎಂ ಯಡಿಯೂರಪ್ಪ, ಪಕ್ಷಾಧ್ಯಕ್ಷರು, ಬಿಎಲ್ ಸಂತೋಷ್, ಪ್ರಧಾನಿ, ಕೇಂದ್ರದ ಪ್ರಮುಖರು ಸೇರಿ ನನ್ನನ್ನು ಉಪಮುಖ್ಯಮಂತ್ರಿ ಮಾಡಿದ್ದಾರೆ. ನಾನು ಎಂದೂ ಅಧಿಕಾರಕ್ಕೆ ಜೋತು ಬೀಳುವವನಲ್ಲ' ಎಂದು ಡಿಸಿಎಂ ಹುದ್ದೆ ವಿರೋಧಿಸುವ ಪಕ್ಷದೊಳಗಿನ ಬಣಕ್ಕೆ ತಿರುಗೇಟು ನೀಡಿದ್ದಾರೆ.