ನವದೆಹಲಿ, ಡಿ 31 (Daijiworld News/PY) : 2025ರ ವೇಳೆಗೆ ಭಾರತವನ್ನು 5 ಲಕ್ಷ ಕೋಟಿ ಡಾಲರ್ ಆರ್ಥಿಕತೆಯನ್ನಾಗಿ ಮಾಡಲು 102 ಲಕ್ಷ ಕೋಟಿ ರೂ.ಗಳ ಹೂಡಿಕೆಗೆ ತೀರ್ಮಾನಿಸಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ತಿಳಿಸಿದ್ದಾರೆ.
ಮಂಗಳವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಸರ್ಕಾರ 100 ಲಕ್ಷ ಕೋಟಿ ರೂ. ಮೂಲಸೌಕರ್ಯಕ್ಕಾಗಿ ಹೂಡಿಕೆ ಮಾಡುವ ಯೋಜನೆಯನ್ನು ರೂಪಿಸಿದೆ, ಅಲ್ಲದೆ ಇದಕ್ಕೆ ಇನ್ನೂ 3 ಲಕ್ಷ ಕೋಟಿ ರೂ. ಯೋಜನೆಗಳನ್ನು ಸೇರಿಸುವ ಸಾಧ್ಯತೆ ಇದೆ ಎಂದು ಸಚಿವರು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ನೀಡಿದ ಭರವಸೆಯಂತೆ ಸರ್ಕಾರ ಈಡೇರಿಸಲು ಮುಂದಾಗಿದೆ. 102 ಲಕ್ಷ ಕೋಟಿಯ ರಾಷ್ಟ್ರೀಯ ಮೂಲಸೌಕರ್ಯ ಯೋಜನೆಯು 2025ರೊಳಗೆ ಭಾರತದ ಆರ್ಥಿಕತೆಯ 5 ಟ್ರಿಲಿಯನ್ ಡಾಲರ್ ಗುರಿ ತಲುಪಲು ಸಹಾಯಕವಾಗಿದ್ದು, ಸರ್ಕಾರವು ಮೂಲಸೌಕರ್ಯ ವಲಯಕ್ಕೆ ಆದ್ಯತೆ ನೀಡಿದೆ ಎಂದು ಹಣಕಾಸು ಸಚಿವೆ ಹೇಳಿದ್ದಾರೆ.
ವಿದ್ಯುತ್, ರೈಲ್ವೆ, ನಗರ ನೀರಾವರಿ, ಮೊಬಿಲಿಟಿ , ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಯೋಜನೆಗಳನ್ನು ಗುರುತಿಸಲಾಗಿದೆ.ಸುಮಾರು 25 ಲಕ್ಷ ಕೋಟಿ ಇಂಧನ ಯೋಜನೆಗಳನ್ನು ಪೂರೈಸಲಾಗುತ್ತಿದೆ. ರಸ್ತೆಗಳಲ್ಲಿ ಇನ್ನೂ 20 ಲಕ್ಷ ಕೋಟಿ ರೂ. ಹಾಗೂ ಸುಮಾರು 14 ಲಕ್ಷ ಕೋಟಿ ರೈಲ್ವೆ ಯೋಜನೆಗಳಿವೆ. ನವೀಕರಿಸಬಹುದಾದ ವಲಯ, ರೈಲ್ವೆ, ನಗರಾಭಿವೃದ್ಧಿ, ನೀರಾವರಿ, ಶಿಕ್ಷಣ, ಆರೋಗ್ಯ, ನೀರು ಮತ್ತು ಡಿಜಿಟಲ್ ಸೇರಿದಂತೆ ಹಲವು ವಲಯಗಳಲ್ಲಿ ಹೊಸ ಯೋಜನೆಗಳು ಬರಲಿದೆ. ಈ ಕ್ಷೇತ್ರಗಳು ರಾಷ್ಟ್ರೀಯ ಮೂಲಸೌಕರ್ಯದ ಕ್ಷೇತ್ರದಡಿಯಲ್ಲಿ ಬರಲಿದ್ದು ಮಂಗಳವಾರ ಘೋಷಣೆಯಾದ ಹೂಡಿಕೆಯ ಬಹುಭಾಗವನ್ನು ರೂಪಿಸಲಿವೆ ಎಂದು ಸೀತಾರಾಮನ್ ತಿಳಿಸಿದ್ದಾರೆ.