ಬೆಂಗಳೂರು, ಡಿ 31 (DaijiworldNews/SM): ಈಗಾಗಲೇ ಬೈ ಎಲೆಕ್ಷನ್ ಗೆದ್ದುಕೊಂದಿರುವ ಬಿಎಸ್ ವೈ ನೇತೃತ್ವದ ಬಿಜೆಪಿ ಸರಕಾರ ಇದೀಗ ಸಂಪುಟ ವಿಸ್ತರಣೆಯ ಸಂಕಶ್ಟದಲ್ಲಿ ಪರದಾಡುತ್ತಿದೆ. ಮಕರ ಸಂಕ್ರಾಂತಿ ಬಳಿಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಮ್ಮ ನೇತೃತ್ವದ ಸಂಪುಟ ವಿಸ್ತರಣೆ ಮಾಡಲಿದ್ದಾರೆ. ಮತ್ತೊಂದೆಡೆ ಸಚಿವ ಸ್ಥಾನದ ಆಕಾಂಕ್ಷಿಗಳ ಲೀಸ್ಟ್ ಹೆಚ್ಚುತ್ತಿದ್ದಂತೆ, ಮಂತ್ರಿಗಿರಿಗಾಗಿ ಲಾಬಿ ತೀವ್ರಗೊಳ್ಳುತ್ತಿದೆ.
ಆಕಾಂಕ್ಷಿಗಳಾಗಿರುವ ಬಿಜೆಪಿಯ ಪ್ರಮುಖ ಶಾಸಕರು ಸಿಎಂ ಅವರನ್ನು ಭೇಟಿಯಾಗಿ ಮಂತ್ರಿ ಸ್ಥಾನ ನೀಡುವ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಅದರಲ್ಲೂ ಪ್ರಮುಖವಾಗಿ ಬಿಜೆಪಿ ಹಿರಿಯ ಶಾಸಕ ಉಮೇಶ್ ಕತ್ತಿ ಪದೇ ಪದೆ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗುತ್ತಿದು, ಸಚಿವ ಸ್ಥಾನಕ್ಕಾಗಿ ನಿರಂತರ ಒತ್ತಡ ಹಾಕುತ್ತಿದ್ದಾರೆ.
ಮತ್ತೊಂದೆಡೆ ಈಗಾಗಲೇ ಅನರ್ಹರಿಗೆ ಸಚಿವ ಸ್ಥಾನ ನೀಡುವ ಭರವಸೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಕೊಟ್ಟ ಮಾತು ಉಳಿಸಿಕೊಳ್ಳುವುದು ಸಿಎಂ ಅವರಿಗೆ ಅನಿವಾರ್ಯವೆನಿಸಿದೆ. ಈ ನಡುವೆ ಅನರ್ಹ ಶಾಸಕರೂ ಕೂಡ ಬಿಎಸ್ ವೈ ನಿವಾಸದತ್ತ ತೆರಳಿ ತಮ್ಮಿಷ್ಟದಂತೆ ಮಂತ್ರಿಗಿರಿ ನೀಡುವಂತೆ ಮನವಿ ಮಾಡುತ್ತಿದ್ದಾರೆ.
ಮತ್ತೊಂದೆಡೆ ಆರ್.ಶಂಕರ್ ಕೂಡ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಕಾಂಗ್ರೆಸ್ ನ ರಿಜ್ವಾನ್ ಅರ್ಷದ್ ಅವರಿಂದ ತೆರವಾದ ಎಂಎಲ್ ಸಿ ಸ್ಥಾನಕ್ಕೆ ತಮ್ಮನ್ನು ಪರಿಗಣಿಸಸುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ತಮ್ಮನ್ನು ಎಂಎಲ್ ಸಿ ಮಾಡಿ ಸಚಿವ ಸ್ಥಾನ ನೀಡುವುದಾಗಿ ಯಡಿಯೂರಪ್ಪ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಸದ್ಯಕ್ಕೆ ತೆರವಾಗಿರುವ ಒಂದು ಎಂಎಲ್ ಸಿ ಸ್ಥಾನಕ್ಕೆ ತಮ್ಮನ್ನು ಪರಿಗಣಿಸುವಂತೆ ಒತ್ತಾಯಿಸಿದ್ದಾರೆ ಎಂದು ಹೇಳಲಾಗಿದೆ.
ಯಡಿಯೂರಪ್ಪ ಅವರು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರನ್ನು ಎಂ.ಎಲ್.ಸಿ ಮಾಡಲು ಉದ್ದೇಶಿಸಿದ್ದಾರೆ. ಲಕ್ಷ್ಮಣ್ ಸವದಿ ಡಿಸಿಎಂ ಸ್ಥಾನ ಉಳಿಸಿಕೊಳ್ಳಬೇಕಾದರೆ, ಆರು ತಿಂಗಳೊಳಗೆ ಪರಿಷತ್ ಸದಸ್ಯರಾಗಿ ಆಯ್ಕೆಯಾಗಬೇಕಾಗಿದೆ. ಈಗ ಆ ಅವಧಿ ಮುಗಿಯುತ್ತಾ ಬಂದಿದೆ. ಹೀಗಾಗಿ ತೆರವಾಗಿರುವ ಒಂದು ಪರಿಷತ್ ಸ್ಥಾನವನ್ನು ಸವದಿಗೆ ನೀಡಲು ಸಿಎಂ ಒಲವು ಹೊಂದಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಸಿಎಂ ಬಿಎಸ್ ವೈ ಸರಕಾರ ಅಭಿವೃದ್ಧಿ ಕಾರ್ಯಗಳತ್ತ ಚಿತ್ತ ಹರಿಸುವ ಅಗತ್ಯವೂ ಇದೆ. ಆದರೆ, ಸದ್ಯ ಎದುರಾಗಿರುವ ಸಂಪುಟ ಸಂಕಷ್ಟಕ್ಕೆ ಸಿಎಂ ಜಾಣತನದ ಲೆಕ್ಕಾಚಾರದ ಮೂಲಕವಷ್ಟೇ ಉತ್ತರ ಕಂಡುಕೊಳ್ಳಲು ಸಾಧ್ಯವಿದೆ.