ನವದೆಹಲಿ, ಜ 01 (Daijiworld News/MB) : ಭಾರತೀಯ ರೈಲ್ವೆ ಇಲಾಖೆ ತನ್ನೆಲ್ಲಾ ರೈಲ್ವೆ ಸೇವೆಗಳ ಶುಲ್ಕ ಹೆಚ್ಚಳ ಮಾಡಿ ಘೋಷಣೆ ಹೊರಡಿಸಿದ್ದು ಉಪನಗರ ರೈಲುಗಳನ್ನು ಹೊರತುಪಡಿಸಿ, ಉಳಿದೆಲ್ಲಾ ರೈಲ್ವೆ ಸೇವೆಗಳಲ್ಲಿ ಶುಲ್ಕ ಇಂದಿನಿಂದ ಏರಿಕೆಯಾಗಲಿದೆ.
ಈ ಆದೇಶವನ್ನು ರೈಲ್ವೇ ಇಲಾಖೆ ಮಂಗಳವಾರ ನೀಡಿದ್ದು ನಾನ್ ಎಸಿ ಪ್ರಯಾಣಕ್ಕೂ ಪ್ರತಿ ಕಿ.ಮೀ.ಗೆ 1 ಪೈಸೆ ಹೆಚ್ಚಳವಾಗಿದೆ. ರೈಲ್ವೆ ಮೇಲ್ / ಎಕ್ಸ್ಪ್ರೆಸ್ ಎಸಿ ರಹಿತ ರೈಲುಗಳ ದರದಲ್ಲಿ ಎರಡು ಪೈಸೆ / ಕಿಮೀ ಮತ್ತು ಎಸಿ ತರಗತಿಗಳ ದರದಲ್ಲಿ ನಾಲ್ಕು ಪೈಸೆ / ಕಿಮೀ ಹೆಚ್ಚಳ ಮಾಡಲಾಗಿದೆ.
ಹಾಗೆಯೇ ಪ್ರೀಮಿಯಂ ರೈಲುಗಳಾದ ಶತಾಬ್ದಿ, ರಾಜಧಾನಿ ಮತ್ತು ಡುರೊಂಟೊ ರೈಲುಗಳ ಶುಲ್ಕವೂ ಹೆಚ್ಚಳವಾಗಿದೆ. 1,447 ಕಿ.ಮೀ ದೂರ ಕ್ರಮಿಸುವ ದೆಹಲಿ-ಕೋಲ್ಕತಾ ರಾಜಧಾನಿ ಎಕ್ಸ್ಪ್ರೆಸ್ನ ಪ್ರತಿ ಕಿ.ಮೀ.ಗೆ 4 ಪೈಸೆ ದರ ಹೆಚ್ಚಳ ಮಾಡಲಾಗಿದೆ. ಹಾಗಾಗಿ ಅಂದಾಜು 58 ರೂ. ಹೆಚ್ಚಳ ಮಾಡಲಾಗಿದೆ.
ಆದರೆ ರಿಸರ್ವೇಷನ್ ಶುಲ್ಕ ಮತ್ತು ಸೂಪರ್ಫಾಸ್ಟ್ ಶುಲ್ಕದಲ್ಲಿ ಯಾವುದೇ ಬದಲಾವಣೆ ಇಲ್ಲ, ಹಾಗೆಯೇ ದರಗಳ ಹೆಚ್ಚಳವು ಈಗಾಗಲೇ ಕಾಯ್ದಿರಿಸಿದ ಟಿಕೆಟ್ಗಳಿಗೆ ಅನ್ವಯ ಆಗುವುದಿಲ್ಲ.