ರಾಮನಗರ, ಜ 01 (Daijiworld News/MB) : ಕನಕಪುರ ತಾಲೂಕಿನ ಕಪಾಲ ಬೆಟ್ಟದಲ್ಲಿ ಡಿಕೆ ಶಿವಕುಮಾರ್ ನಿರ್ಮಿಸಲು ಮುಂದಾಗಿರುವ ಯೇಸು ಪ್ರತಿಮೆಯ ಕಾಮಗಾರಿ ಸ್ಥಗಿತಗೊಂಡಿದ್ದು ಬೆಟ್ಟದಲ್ಲಿ ಪೊಲೀಸ್ ಕಾವಲು ಹಾಕಲಾಗಿದೆ.
ಈ ವಿವಾದ ಸಂಬಂಧ ಜಿಲ್ಲಾಡಳಿತದಿಂದ ವರದಿ ಸಲ್ಲಿಕೆಯಾಗುವ ಮೊದಲೇ ಕನಕಪುರ ತಹಶೀಲ್ದಾರ್ ಆನಂದಯ್ಯ ಅವರನ್ನು ದಿಢೀರ್ ವರ್ಗಾವಣೆ ಮಾಡಿದ್ದು ಇದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ನೂತನ ಕನಕಪುರ ತಹಶೀಲ್ದಾರ್ ಆಗಿ ಯಳಂದೂರು ತಹಶೀಲ್ದಾರ್ ವರ್ಷಾ ಅವರನ್ನು ವರ್ಗಾವಣೆ ಮಾಡಲಾಗಿದೆ. ಆದರೆ ಆನಂದಯ್ಯ ಅವರಿಗೆ ಯಾವುದೇ ಜಾಗವನ್ನು ನಿಗದಿ ಮಾಡಿಲ್ಲ. ವರ್ಷಾ ಅವರು ಮಂಗಳವಾರ ಅಧಿಕಾರ ವಹಿಸಿಕೊಂಡಿಲ್ಲ. ಹಾಗೆಯೇ ಆನಂದಯ್ಯ ಅವರು ಕೂಡಾ ಕಚೇರಿಗೆ ಬಂದಿಲ್ಲ.
ರಾಜ್ಯ ಸರ್ಕಾರ ಈ ಕುರಿತು ವರದಿ ನೀಡುವಂತೆ ಸೂಚನೆ ನೀಡಿದ ಮೇರೆಗೆ ಕಳೆದ ವಾರ ಆನಂದಯ್ಯ ಹಾಗೂ ಉಪವಿಭಾಗಧಿಕಾರಿ ದಾಕ್ಷಾಯಿಣಿ ಬೆಟ್ಟಕ್ಕೆ ಭೇಟಿ ನೀಡಿ ಸ್ಥಳದ ಪರಿಶೀಲನೆ ನಡೆಸಿದ್ದರು. ಒಂದೇ ವಾರದಲ್ಲಿ ವರದಿ ಸಲ್ಲಿಸಬೇಕಾಗಿತ್ತು ಆದರೆ ತಹಶೀಲ್ದಾರ್ ಅವರನ್ನು ದಿಢೀರ್ ವರ್ಗಾವಣೆ ಮಾಡಲಾಗಿದೆ.
ಈ ನಡುವೆ ಆನಂದಯ್ಯ ಡಿಕೆ ಶಿವಕುಮಾರ್ ಅವರಿಗೆ ಆಪ್ತರು ಎಂಬ ಕಾರಣಕ್ಕೆ ಸರ್ಕಾರ ತಹಶೀಲ್ದಾರ್ ಅವರನ್ನು ವರ್ಗಾವಣೆ ಮಾಡಿದೆ ಎಂಬ ಮಾತುಗಳು ಕೂಡಾ ಕೇಳಿ ಬರುತ್ತಿದೆ. ಹಲವು ಮುಖಂಡರು ಬಹಿರಂಗವಾಗಿ ಆನಂದಯ್ಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಕಾಮಗಾರಿಯು ಸ್ಥಗಿತಗೊಂಡಿದ್ದು ಕಾರ್ಮಿಕರು ಸ್ಥಳ ಬಿಟ್ಟು ತೆರಳಿದ್ದಾರೆ.