ಬೆಂಗಳೂರು, ಜ.01 (Daijiworld News/PY) : ಇಸ್ರೋದ ಮತ್ತೊಂದು ನೂತನ ಯೋಜನೆಯಾದ ಚಂದ್ರಯಾನ -3 ಹಾಗೂ ಗಗನಯಾನ ಯೋಜನೆಗೆ ಅನುಮತಿ ದೊರಕಿದ್ದು ಈ ಯೋಜನೆಗೆ ಭಾರತೀಯ ವಾಯುಪಡೆಯ ನಾಲ್ವರು ಸಿಬ್ಬಂದಿಯನ್ನು ಗುರುತಿಸಿ ಅವರಿಗೆ ಗಗನಯಾನದ ತರಬೇತಿ ನೀಡಲಾಗುವುದು ಎಂದು ಇಸ್ರೋ ಅಧ್ಯಕ್ಷ ಕೆ ಶಿವನ್ ತಿಳಿಸಿದ್ದಾರೆ.
ಬುಧವಾರ ಬೆಂಗಳೂರಿನ ಇಸ್ರೊ ಕೇಂದ್ರದಲ್ಲಿ ಸುದ್ದಿಗೋಷ್ಠಿ ಕರೆದು ಮಾತನಾಡಿದ ಕೆ ಶಿವನ್, "ಈ ವರ್ಷವೇ ಚಂದ್ರಯಾನ-3 ಯೋಜನೆ ಉಡಾವಣೆಗೊಳ್ಳಲಿದೆ. ಆದರೆ, ಗಗನಯಾನದ ಹಲವು ವ್ಯವಸ್ಥೆಗಳು ಪರೀಕ್ಷೆಗೊಳಪಡಬೇಕಾಗುತ್ತದೆ" ಎಂದು ತಿಳಿಸಿದರು.
"ಈ ಯೋಜನೆಗೆ ಭಾರತೀಯ ವಾಯುಪಡೆಯ ನಾಲ್ವರು ಸಿಬ್ಬಂದಿಯನ್ನು ಗುರುತಿಸಿ, ಅವರಿಗೆ ತರಬೇತಿ ನೀಡುವುದು ಈ ವರ್ಷದ ಪ್ರಮುಖ ಕಾರ್ಯವಾಗಿದೆ" ಎಂದು ತಿಳಿಸಿದ್ದಾರೆ.
"ಚಂದ್ರಯಾನ-3 ಯೋಜನೆಗೆ ಇಸ್ರೊ ವಿಜ್ಞಾನಿಗಳು ಸಂಪೂರ್ಣ ನೂತನ ಲ್ಯಾಂಡರ್ ಹಾಗೂ ರೋವರ್ ಅನ್ನು ನಿರ್ಮಾಣ ಮಾಡಲಿದ್ದಾರೆ. ಇದು ಬೇರ್ಪಡಿಸಬಹುದಾಗ ಘಟಕವನ್ನು ಹೊಂದಿರಲಿದ್ದು, ಇದರಲ್ಲಿ ಎಂಜಿನ್ ಮತ್ತು ಇಂಧನವಿರುತ್ತದೆ" ಎಂದು ಹೇಳಿದರು.
"ಎರಡನೇ ಅಂತರಿಕ್ಷ ಬಂದರು ನಿರ್ಮಾಣಕ್ಕೆ ಭೂ ಸ್ವಾಧೀನ ಪ್ರಕ್ರಿಯೆ ಆರಂಭವಾಗಿದ್ದು ತಮಿಳು ನಾಡಿನ ತೂತುಕುಡಿಯಲ್ಲಿ ನಿರ್ಮಾಣವಾಗಲಿದೆ" ಎಂದು ತಿಳಿಸಿದರು.