ನವದೆಹಲಿ, ಜ.01 (Daijiworld News/PY) : ಐತಿಹಾಸಿಕ ದೆಹಲಿ ಗೇಟ್ 42 ಮೀಟರ್ ಎತ್ತರವಿದ್ದು, ಮುಂದೆ ನಿರ್ಮಾಣವಾಗುವ ಯಾವುದೇ ಕಟ್ಟಡಗಳು ಇದಕ್ಕಿಂತ ಒಂದು ಇಂಚು ಎತ್ತರ ಕೂಡ ಇರುವಂತಿಲ್ಲ. ಎಲ್ಲಾ ಕಟ್ಟಡಗಳು ಕೂಡ ಏಕರೂಪತೆಯಿಂದ ಕೂಡಿರಲು ಕೇಂದ್ರ ನಗರಾಭಿವೃದ್ಧಿ ಸಚಿವಾಲಯ ಈ ನಿರ್ಧಾರ ಕೈಗೊಂಡಿದೆ.
ಕೇಂದ್ರೀಯ ಭಾಗದಲ್ಲಿ ಕೇಂದ್ರ ಸರ್ಕಾರದ ಸಚಿವಾಲಯಗಳು, ನೂತನ ಸಂಸತ್ ಭವನ, ರಾಜಪಥವನ್ನು ನವೀಕರಣಗೊಳಿಸಲಾಗುತ್ತಿದೆ, ದೆಹಲಿ ಗೇಟ್ 42 ಮೀಟರ್ ಎತ್ತರವಿರುವುದರಿಂದ ನೂತನವಾಗಿ ಯಾವುದೇ ಕಟ್ಟಡಗಳನ್ನು ನಿರ್ಮಿಸಿದರೂ ದೆಹಲಿ ಗೇಟ್ನ ಎತ್ತರಕ್ಕಿಂತ ಒಂದಿಂಚು ಎತ್ತರ ಇರುವಂತಿಲ್ಲ, ಎಲ್ಲಾ ಕಟ್ಟಡಗಳು ಒಂದೇ ರೀತಿಯಾಗಿರಬೇಕು ಎಂದು ಕೇಂದ್ರ ನಗರಾಭಿವೃದ್ಧಿ ಸಚಿವಾಲಯ ನಿರ್ಧರಿಸಿದೆ.
ಮೂರು ಕಟ್ಟಡಗಳ ನಿರ್ಮಾಣದ ಗುತ್ತಿಗೆ ಗುಜರಾತ್ ಮೂಲದ ಎಚ್ಸಿಪಿ ಡಿಸೈನ್ ಸಂಸ್ಥೆಗೆ ನೀಡಲಾಗಿದ್ದು, 2022ಕ್ಕೆ 75ನೇ ಸ್ವಾತಂತ್ರೋತ್ಸವ ಆಚರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸಂಸತ್ ಭವನವನ್ನು ಈ ಅವಧಿಯೊಳಗೆ ನಿರ್ಮಿಸಲು ನಿರ್ಧರಿಸಲಾಗಿದೆ. ಉಳಿದ ಕಟ್ಟಡಗಳನ್ನು 2024ಕ್ಕೆ ಪೂರ್ಣಗೊಳಿಸಲು ತೀರ್ಮಾನಿಸಲಾಗಿದೆ.
ಈ ಮೂರು ಕಟ್ಟಡಗಳ ನಿರ್ಮಾಣವು ಸುಮಾರು 12 ಸಾವಿರ ಕೋಟಿ ರೂ.ವೆಚ್ಚದ ಯೋಜನೆಯನ್ನು ಹೊಂದಿದೆ.
ರಾಷ್ಟ್ರಪತಿ ಭವನವು 345 ಎಕರೆ ವಿಸ್ತೀರ್ಣ ಹೊಂದಿದ್ದು, ಈ ಪೈಕಿ 60 ಎಕರೆಯಲ್ಲಿ ಜೈವಿಕ ಉದ್ಯಾನ ನಿರ್ಮಿಸಲು ಉದ್ದೇಶವನ್ನು ಹೊಂದಿದ್ದು, ಜೊತೆಗೆ ಉಪರಾಷ್ಟ್ರಪತಿ ಹಾಗೂ ಪ್ರಧಾನಿ ನಿವಾಸವನ್ನು ಕೂಡ ನವೀಕರಿಸುವ ಸಾಧ್ಯತೆ ಇದೆ.