ಬೆಳಗಾವಿ, ಜ 02 (Daijiworld News/MB) : "ಬಿಜೆಪಿ ಪಕ್ಷದಲ್ಲಿ ನಿಷ್ಠೆಯಿಂದ ಇದ್ದೇನೆ, ಆದರೆ ಈಗಲೂ ಸಿದ್ಧರಾಮಯ್ಯ ನನಗೆ ಮಾರ್ಗದರ್ಶಕರು" ಎಂದು ಶಾಸಕ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಬೆಳಗಾವಿಯ ಒಂದು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ನನಗೆ ಈಗಲೂ ಸಿದ್ದರಾಮಯ್ಯ ಅವರೇ ನಾಯಕ. ಇದನ್ನು ಹೇಳಲು ನನಗೆ ಯಾವುದೇ ಭಯವಿಲ್ಲ. ಅವರ ಮೇಲೆ ನನ್ನ ನಿಷ್ಠೆ ಎಂದಿಗೂ ಇರುತ್ತದೆ. ಆದರೆ ದುರಾದೃಷ್ಟವಶಾತ್ ಅವರು ನಾನು ಬೇರೆ ಬೇರೆ ಪಕ್ಷದಲ್ಲಿ ಇರುವಂತಾಗಿದೆ" ಎಂದು ತಿಳಿಸಿದ್ದಾರೆ.
"ಸಿದ್ಧರಾಮಯ್ಯ ಅವರು ಉತ್ತಮ ವ್ಯಕ್ತಿ, ಮೈತ್ರಿ ಸರ್ಕಾರಕ್ಕೆ ಉತ್ತಮ ಖಾತೆಯನ್ನು ಅವರು ನೀಡಿದ್ದರು. ಆದರೆ ಅವರು ಕೆಲವು ಕಾಂಗ್ರೆಸ್ ನಾಯಕರೊಂದಿಗೆ ಹೆಚ್ಚಿನ ಸಂಪರ್ಕವಾಗುತ್ತಿರಲಿಲ್ಲ. ನಾನು ಬಂಡಾಯ ಎದ್ದ ಸಂದರ್ಭದಲ್ಲಿ ನನ್ನ ಮನವೊಲಿಕೆ ಮಾಡಲು ಬಹಳ ಪ್ರಯತ್ನ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿದ್ದ ಕೆಲವರು ಎಲ್ಲಾ ಬಂಡಾಯಕ್ಕೂ ಸಿದ್ಧರಾಮಯ್ಯ ಅವರೇ ಹೊಣೆ ಎಂದು ಪಿತೂರಿ ಮಾಡಿದ್ದಾರೆ" ಎಂದು ಹೇಳಿದ್ದಾರೆ.
"ಸಿದ್ಧರಾಮಯ್ಯ ಅವರು ಇತ್ತೀಚೆಗೆ ಬೆಂಗಳೂರಿನಲ್ಲಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸಂದರ್ಭದಲ್ಲಿ ಅವರ ಆರೋಗ್ಯ ವಿಚಾರಿಸಲು ಹೋದ ಅವರು ಅನೇಕ ವಿಷಯಗಳು ಕುರಿತು ಚರ್ಚೆ ಮಾಡಿದ್ದಾರೆ. ಅವರು ಭಾವೋದ್ವೇಗದಿಂದ ಮಾತನಾಡಿದ್ದಾರೆ. ನಾನು ಇತರ ಬಂಡಾಯ ಶಾಸಕರೊಂದಿಗೆ ಸೇರಿ ಮೈತ್ರಿ ಸರ್ಕಾರವನ್ನು ಬೀಳಿಸಲಿಲ್ಲ. ಆದರೆ ಕೆಟ್ಟ ಆಡಳಿತಕ್ಕೆ ಹೊಣೆಯಾದ ಮೈತ್ರಿ ಸರ್ಕಾರದಲ್ಲಿನ ಕೆಲವರಿಗೆ ತಕ್ಕುದಾದ ಪಾಠ ಕಲಿಸಬೇಕಾದ ಅಗತ್ಯತೆ ಇತ್ತು" ಎಂದು ವಿವರಿಸಿದರು.