ಚೆನ್ನೈ, ಜ 02 (Daijiworld News/MB) : ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ವಿರುದ್ಧ ಹೇಳಿಕೆ ನೀಡಿದ ತಮಿಳು ಬರಹಗಾರ, ವಾಗ್ಮಿ ನೆಲ್ಲೈ ಕಣ್ಣನ್ ಅವರನ್ನು ಪೆರಂಬಲೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ.
ಡಿಸೆಂಬರ್ 29 ರಂದು ಎಸ್ಡಿಪಿಐ ಆಯೋಜನೆ ಮಾಡಿದ್ದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಯಲ್ಲಿ ಮಾತನಾಡಿದ ಕಣ್ಣನ್, "ಅಮಿತ್ ಷಾ ಅವರು ಪ್ರಧಾನಿ ಮೋದಿಯವರ ಮಿದುಳು ಇದ್ದಂತೆ, ಅಮಿತ್ ಷಾ ಅವರ ಕತೆ ಮುಗಿದರೆ, ಮೋದಿ ಕತೆಯೂ ಮುಗಿಯುತ್ತದೆ. ಇಷ್ಟೆಲ್ಲಾ ಆದರೂ ಕೂಡಾ ಇನ್ನೂ ಇವರಿಬ್ಬರನ್ನು ಯಾವ ಮುಸ್ಲಿಮರು ಯಾಕೆ ಹತ್ಯೆ ಮಾಡಲು ಮುಂದಾಗಿಲ್ಲ ಎಂದು ನನಗೆ ಅಚ್ಚರಿಯಾಗುತ್ತಿದೆ" ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಈ ಹಿನ್ನಲೆಯಲ್ಲಿ ಕಣ್ಣನ್ ಅವರ ಈ ಹೇಳಿಕೆ ಹಿಂಸೆಗೆ ಪ್ರಚೋದನೆ ನೀಡುತ್ತದೆ ಎಂದು ಆರೋಪಿಸಿ ಅವರ ಮೇಲೆ ಒಟ್ಟು 15 ದೂರುಗಳು ದಾಖಲಾಗಿತ್ತು. ಪೊಲೀಸರು ಪ್ರತ್ಯೇಕವಾಗಿ ಎಫ್ ಐ ಆರ್ ಕೂಡ ದಾಖಲಿಸಿದ್ದರು.
ನೆಲ್ಲೈ ಕಣ್ಣನ್ ಅವರನ್ನು ಬಂಧನ ಮಾಡುವಂತೆ ಆಗ್ರಹಿಸಿ ಬಿಜೆಪಿ ಹಿರಿಯ ನಾಯಕರಾದ ಪಾನ್ ರಾಧಾಕೃಷ್ಣನ್, ಸಿ.ಪಿ.ರಾಧಾಕೃಷ್ಣನ್, ಎಲ್. ಗಣೇಶನ್ ಹಾಗೂ ಎಚ್. ರಾಜಾ ಅವರು ಮರೀನಾ ಬೀಚ್ನಲ್ಲಿರುವ ಗಾಂಧಿ ಪ್ರತಿಮೆ ಬಳಿ ಕುಳಿತು ಪ್ರತಿಭಟನೆ ಮಾಡಿದ್ದರು.