ನವದೆಹಲಿ, ಜ 02 (Daijiworld News/MSP): ಗಣರಾಜ್ಯೋತ್ಸವದಂದು ನಡೆಯುವ ಪರೇಡ್ನಲ್ಲಿ ಸಂಚರಿಸಲು ಪಶ್ಚಿಮ ಬಂಗಾಳ ಕಳುಹಿಸಿದ್ದ ಸ್ತಬ್ದಚಿತ್ರ ಪರಿಕಲ್ಪನೆಯನ್ನು ರಕ್ಷಣಾ ಇಲಾಖೆ ತಿರಸ್ಕರಿಸಿದೆ.
ಗಣರಾಜ್ಯೋತ್ಸವದಂದು ನಡೆಯುವ ಪರೇಡ್ನಲ್ಲಿ ಸ್ತಬ್ಧಚಿತ್ರಗಳನ್ನು ಪ್ರದರ್ಶಿಸಲು ಪ್ರತಿ ವರ್ಷ 14 ರಾಜ್ಯಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗುತ್ತದೆ.
2020ರ ಗಣರಾಜ್ಯೋತ್ಸವ ಪರೇಡ್ನಲ್ಲಿ ಪಾಲ್ಗೊಳ್ಳಲು 16 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಂದ ಹಾಗೂ ಆರು ಸಚಿವಾಲಯಗಳಿಂದ 24 ಸ್ತಬ್ಧಚಿತ್ರಗಳು ಸೇರಿ ಒಟ್ಟು 56 ಪ್ರಸ್ತಾವಗಳು ಬಂದಿದ್ದವು. ಇದರಲ್ಲಿ 22 ಪ್ರಸ್ತಾವಗಳನ್ನು ಇಲಾಖೆ ಆಯ್ಕೆ ಮಾಡಿದೆ.
ಎರಡು ಹಂತದ ಸಭೆಯ ಬಳಿಕ ಪಶ್ಚಿಮ ಬಂಗಾಳ ಸರ್ಕಾರದ ಸ್ತಬ್ಧಚಿತ್ರ ತಿರಸ್ಕೃರಿಸಲಾಗಿದೆ ಎಂದು ರಕ್ಷಣಾ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ. ಸಂಸ್ಕೃತಿ, ಚಿತ್ರಕಲೆ, ಶಿಲ್ಪಕಲೆ, ಸಂಗೀತ, ವಸ್ತುಶಿಲ್ಪ, ನೃತ್ಯ ಸಂಯೋಜನೆ ಮತ್ತಿತರ ಕ್ಷೇತ್ರಗಳ ಪ್ರಮುಖ ವ್ಯಕ್ತಿಗಳನ್ನು ಒಳಗೊಂಡಿರುವತಜ್ಞರ ಸಮಿತಿಯೂ ದೃಶ್ಯ ಪರಿಣಾಮದ ಮಾನದಂಡ, ಪರಿಕಲ್ಪನೆ ಮುಂತಾದ ವಿಚಾರಗಳನ್ನು ಪರಿಶೀಲಿಸಿ ಆ ಬಳಿಕವೇ ಸ್ತಬ್ಧಚಿತ್ರ ಶಿಫಾರಸ್ಸು ಮಾಡುತ್ತದೆ, ಇಲ್ಲಿ ಅತ್ಯುತ್ತಮ ಸ್ಥಬ್ದಚಿತ್ರ ಮಾತ್ರ ಆಯ್ಕೆಯಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.