ತುಮಕೂರು, ಜ 02 (Daijiworld News/MB) : ತುಮಕೂರಿಗೆ ಆಗಮಿಸಿ ಕನ್ನಡದಲ್ಲಿ ಭಾಷಣ ಆರಂಭ ಮಾಡಿದ ಪ್ರಧಾನಿ ನರೇಂದ್ರ ಮೋದಿಯವರು "ನನಗೆ ತುಮಕೂರಿಗೆ ಬಂದದ್ದು ಸಂತೋಷವಾಗಿದೆ" ಎಂದು ಹೇಳಿದ್ದಾರೆ.
ಎಲ್ಲರಿಗೂ ನಮಸ್ಕಾರ ಎಂದು ಕನ್ನಡದಲ್ಲಿ ಹೇಳಿ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಯವರ ನಾಡಾದ ತುಮಕೂರಿಗೆ ಬರಲು ಸಂತೋಷವಾಗುತ್ತಿದೆ. ಮೊದಲಿಗೆ ನಿಮಗೆಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಈ ಸಂದರ್ಭದಲ್ಲಿ ಸಿದ್ದಗಂಗಾ ಶ್ರೀಗಳು ಇಲ್ಲವೆಂಬ ಶೂನ್ಯ ಕಾಡುತ್ತಿದೆ. ಕರ್ನಾಟಕದ ಮಹಾನ್ ಸಂತ ಪೇಜಾವರ ಶ್ರೀಗಳು ಭೌತಿಕವಾಗಿ ಇಲ್ಲವಾಗಿರುವುದು ನೋವಿನ ವಿಚಾರ ಎಂದು ಹೇಳಿದರು.
ಮೋದಿಯವರು ಮೂರು ಸಂಕಲ್ಪಗಳನ್ನು ಜನರ ಮುಂದಿಟ್ಟು "ಏಕ ಬಳಕೆ ಪ್ಲಾಸ್ಟಿಕ್ನಿಂದ ದೇಶ ಮುಕ್ತವಾಗಬೇಕು, ಪರಿಸರ ಸಂರಕ್ಷಣೆ ಮಾಡಬೇಕು ಹಾಗೂ ಜಲ ಸಂರಕ್ಷಣೆ ಮಾಡಬೇಕು ಎಂದು ಹೇಳಿದ್ದಾರೆ.
"ನಾನು ದೇಶದ ಜನರಿಗಾಗಿ ಹಗಲಿರುಳು ದುಡಿಯುತ್ತಿದ್ದೇನೆ. ಅವರಿಗೆ ಮನೆ, ವಿದ್ಯುತ್ ಎಲ್ಪಿಜಿ ಗ್ಯಾಸ್, ನೀರು ಮುಂತಾದ ವ್ಯವಸ್ಥೆ ಕಲ್ಪಿಸಲು ಶ್ರಮ ಪಡುತ್ತಿದ್ದೇನೆ" ಎಂದು ತಿಳಿಸಿದ್ದಾರೆ.
ಎನ್ಆರ್ಸಿ ಹಾಗೂ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಮಾತನಾಡಿದ ಅವರು, "ನಮ್ಮ ದಲಿತ ಸಹೋದರರು, ಜೈನರು, ಕ್ರೈಸ್ತರು, ಸಿಖ್ಖರಿಗೆ ಪಾಕಿಸ್ತಾನದಲ್ಲಿ ಧಾರ್ಮಿಕ ದೌರ್ಜನ್ಯ ನಡೆಯುತ್ತಿದೆ. ಹಾಗಿರುವಾಗ ಅವರ ಸಹಾಯಕ್ಕೆ ಮುಂದಾಗುವುದು ರಾಷ್ಟ್ರೀಯ ಜವಾಬ್ದಾರಿ" ಎಂದು ಹೇಳಿದರು.
ಇನ್ನು ಎನ್ಆರ್ಸಿ, ಸಿಎಎ ವಿರುದ್ಧ ಪ್ರತಿಭಟನೆ ಮಾಡುವವರ ವಿರುದ್ಧ ಸಿಡಿದೆದ್ದ ಮೋದಿಯವರು, "ನಿಮಗೆ ಚಳುವಳಿ ಮಾಡಬೇಕಾದರೆ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ಧಾರ್ಮಿಕ ಶೋಷಣೆಯ ವಿರುದ್ದ ಮಾಡಿ. ಕಾಂಗ್ರೆಸ್ ದೇಶದ ಸಂಸತ್ತಿನ ವಿರುದ್ಧ ಆಂದೋಲನ ಮಾಡುತ್ತಿದೆ. ಕಾಂಗ್ರೆಸ್ ಪಾಕಿಸ್ತಾನದಲ್ಲಿ 60 ವರ್ಷಗಳಿಂದ ಅಲ್ಪಸಂಖ್ಯಾತರ ಮೇಲೆ ನಡೆದ ದೌರ್ಜನ್ಯದ ಕುರಿತು ಮಾತನಾಡುವುದಿಲ್ಲ ಯಾಕೆ? ಅವರ ಬಾಯಿಗೆ ಬೀಗ ಹಾಕಿದೆಯೇ" ಎಂದು ಪ್ರಶ್ನಿಸಿದ್ದಾರೆ.
"ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆ ಮಾಡುವ ನೀವು ಪಾಕಿಸ್ತಾನದ ಕಾರ್ಯಸೂಚಿಯನ್ನು ವಿಫಲಗೊಳಿಸುವಲ್ಲಿ ಪ್ರತಿಭಟನೆ, ಚಳುವಳಿ ಮಾಡಬೇಕು" ಎಂದು ತಿಳಿಸಿದ್ದಾರೆ.