ಬೆಂಗಳೂರು, ಜ 02 (Daijiworld News/MSP): ದಕ್ಷಿಣ ಭಾರತದ ಪ್ರಮುಖ ವಾಣಿಜ್ಯ ಬೆಳೆಗಳಾದ ಕಾಫಿ, ರಬ್ಬರ್, ತೆಂಗು ಮತ್ತಿತರ ಉತ್ಪನ್ನಗಳ ಮೌಲ್ಯ ವರ್ಧನೆಗೆ ಹೆಚ್ಚಿನ ಪ್ರಮುಖ್ಯತೆ ನೀಡುವುದಾಗಿ ಪ್ರಧಾನಿ ನರೇಂದ್ರಮೋದಿ ಹೇಳಿದ್ದಾರೆ. ತುಮಕೂರಿನ ಸರ್ಕಾರಿ ಕಿರಿಯ ಕಾಲೇಜು ಮೈದಾನದಲ್ಲಿ ನಡೆದ ಪ್ರಧಾನಮಂತ್ರಿ ಕೃಷಿ ಸಮ್ಮಾನ್ ನಿಧಿ ಯೋಜನೆಗೆ ಚಾಲನೆ ನೀಡಿ, ದೇಶಾದ್ಯಂತ 32 ರೈತರಿಗೆ ಕೃಷಿ ಕರ್ಮಣ್ ಪ್ರಶಸ್ತಿ ಪ್ರದಾನ ಮಾಡಿದ ಬಳಿಕ ಅವರು ಮಾತನಾಡಿದರು.
ಕರ್ನಾಟಕದಲ್ಲೂ ಅರಿಶಿಣವನ್ನು ಹೆಚ್ಚಾಗಿ ಉತ್ಪಾದಿಸುತ್ತಿದ್ದು ಇದಕ್ಕೆ ಬೆಂಬಲ ನೀಡಲಾಗುವುದು. ಬೆಳಗಾವಿ ಹಾಗೂ ಮೈಸೂರಿನ ದಾಳಿಂಬೆ, ಚಿಕ್ಕಬಳ್ಳಾಪುರ, ಬೆಂಗಳೂರಿನ ಈರುಳ್ಳಿ ಮತ್ತು ಗುಲಾಬಿ, ಚಿಕ್ಕಮಗಳೂರು, ಕೊಡಗು, ಹಾಸನದ ಕಾಫಿಗಳು ವಿಶ್ವ ಮಾನ್ಯತೆ ಪಡೆದಿವೆ. ಈ ಉತ್ಪನ್ನಗಳಿಗಾಗಿ ವಿಶೇಷ ಕ್ಲಸ್ಟರ್ಗಳನ್ನು ಸ್ಥಾಪನೆಗೆ ಮಾಡಲಾಗುತ್ತಿದೆ. ಅವುಗಳ ಮೌಲ್ಯ ಹೆಚ್ಚಿಸಲು ರಫ್ತಿಗೆ ಆದ್ಯತೆ ನೀಡಲಾಗುತ್ತದೆ ಎಂದು ಹೇಳಿದರು. ದಕ್ಷಿಣ ಭಾರತದ ಗೋಡಂಬಿ ಮತ್ತು ತೆಂಗಿಗೆ ಅಂತಾರಾಷ್ಟ್ರೀಯ ಬೇಡಿಕೆ ಇದೆ ಎಂದು ಹೇಳಿದರು.
ಭಾರತದ ರಬ್ಬರ್ ಬೇಡಿಕೆಯನ್ನು ದೇಶೀಯ ಉತ್ಪಾದನೆಯ ಮೂಲಕವೇ ಈಡೇರಿಸಲು ಅವಕಾಶವಿದೆ. ಇದಕ್ಕಾಗಿ ವಿಶೇಷ ಹಬ್ನ್ನು ಸ್ಥಾಪನೆ ಮಾಡಲಾಗುವುದು. ರೈತರಿಗೆ ಪ್ರಧಾನಮಂತ್ರಿ ಕೌಶಲ್ಯಾಭಿವೃದ್ದಿ ಯೋಜನೆಯಡಿ ತರಬೇತಿ ನೀಡಲಾಗುವುದು ಎಂದರು.