ನವದೆಹಲಿ, ಜ 02 (DaijiworldNews/SM):ಮೊಟ್ಟಮೊದಲ ಮಾನವಸಹಿತ ಬಾಹ್ಯಾಕಾಶಯಾನಕ್ಕೆ ಭಾರತ ಸಜ್ಜಾಗಿದ್ದು, ‘ಗಗನಯಾನ’ ಯೋಜನೆಯಲ್ಲಿ ನಭಕ್ಕೆ ಚಿಮ್ಮಲು ನಾಲ್ವರನ್ನು ಆಯ್ಕೆ ಮಾಡಲಾಗಿದೆ. ಮಹತ್ವಾಕಾಂಕ್ಷೆಯ ನೌಕೆ 2022ಕ್ಕೆ ಉಡಾವಣೆಗೊಳ್ಳಲಿದ್ದು, ಯೋಜನೆಯ ವಿನ್ಯಾಸ ಪೂರ್ಣಗೊಂಡಿದೆ.
ಮಾನವ ಸಹಿತ ಬಾಹ್ಯಾಕಾಶಯಾನಕ್ಕೆ ವಾಯುಸೇನೆಯ 12 ಜನರನ್ನು ಆಯ್ಕೆ ಮಾಡಿ ಅವರಿಗೆ ಭಾರತದಲ್ಲಿ ಮೊದಲಿಗೆ ವೈದ್ಯಕೀಯ ಪರೀಕ್ಷೆ ಮಾಡಲಾಗಿತ್ತು. ನಂತರ ರಷ್ಯಾದಲ್ಲಿ ತಪಾಸಣೆ ನಡೆಸಿ ನಾಲ್ವರನ್ನು ಅಂತಿಮಗೊಳಿಸಲಾಗಿದೆ. ಜನವರಿ ಅಂತ್ಯದಲ್ಲಿ ಇವರಿಗೆ ರಷ್ಯಾದಲ್ಲಿ ತರಬೇತಿ ಆರಂಭವಾಗುತ್ತದೆ ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ(ಇಸ್ರೋ) ಅಧ್ಯಕ್ಷ ಕೆ. ಶಿವನ್ ಯೋಜನೆ ಕುರಿತು ಮಾಹಿತಿ ನೀಡಿದ್ದಾರೆ.
ಇಸ್ರೋ ಮುಖ್ಯ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವರ್ಷ 25ಕ್ಕೂ ಹೆಚ್ಚು ಬಾಹ್ಯಾಕಾಶ ಯೋಜನೆ ಕೈಗೊಳ್ಳುವ ಮೂಲಕ ಅಂತರಿಕ್ಷ ಕ್ಷೇತ್ರದಲ್ಲಿ ಭಾರತ ಮಹತ್ವದ ಮೈಲುಗಲ್ಲು ಸಾಧಿಸಲಿದೆ ಎಂದರು.
3ನೇ ಹಂತದಲ್ಲಿ ಕೈಕೊಟ್ಟ ಚಂದ್ರಯಾನ-2
ಕಳೆದ ವರ್ಷ ಉಡಾವಣೆಯಾಗಿದ್ದ ಚಂದ್ರಯಾನ-2 ಯೋಜನೆಯ ಅಂತಿಮ ಹಂತದ ವೈಫಲ್ಯವನ್ನು ತಜ್ಞರ ಸಮಿತಿ ಅವಲೋಕಿಸಿ ವರದಿ ನೀಡಿದೆ. ಆರ್ಬಿಟರ್ನಿಂದ ಬೇರ್ಪಟ್ಟ ನಂತರ ಅತಿ ಹೆಚ್ಚಿನ ವೇಗದಲ್ಲಿದ್ದ ಲ್ಯಾಂಡರ್ 4 ಹಂತದಲ್ಲಿ ವೇಗ ತಗ್ಗಿಸಿಕೊಂಡು ಚಂದ್ರನ ಮೇಲೆ ಇಳಿಯಬೇಕಿತ್ತು. ಮೊದಲ ಹಂತ ಸಂಪೂರ್ಣ ಯಶಸ್ವಿಯಾಯಿತು. 2ನೇ ಹಂತದಲ್ಲಿ ನಿರೀಕ್ಷೆ ಮಾಡಿದಷ್ಟು ವೇಗ ಕಡಿಮೆ ಆಗಲಿಲ್ಲ. ಇದರಿಂದಾಗಿ 3ನೇ ಹಂತದಲ್ಲಿ ಉಪಕರಣಗಳನ್ನು ನಿಯಂತ್ರಣಕ್ಕೆ ಪಡೆಯಲಾಗದ ಪರಿಸ್ಥಿತಿ ಉದ್ಭವಿಸಿ ಸಂಪರ್ಕ ಕಡಿತಗೊಂಡಿತು. ನಿರ್ದಿಷ್ಟವಾಗಿ ಯಾವ ಉಪಕರಣ ವಿಫಲವಾಯಿತು ಎಂದು ಹೇಳಲಾಗದು. ಒಟ್ಟಾರೆಯಾಗಿ ಲ್ಯಾಂಡರ್ ಒಳಗಿನ ಉಪಕರಣಗಳ ಒಟ್ಟಾರೆ ಸಮನ್ವಯದಲ್ಲಿ ತೊಂದರೆ ಆಗಿದೆ ಎಂದು ತಿಳಿಸಿದರು.
4ನೇ ದೇಶವಾಗಲಿದೆ ಭಾರತ
ರಷ್ಯಾ, ಚೀನಾ ಹಾಗೂ ಅಮೆರಿಕ ಮಾತ್ರ ಬಾಹ್ಯಾಕಾಶಕ್ಕೆ ಯಾತ್ರಿಗಳನ್ನು ಕಳಿಸಿಕೊಟ್ಟಿದ್ದು, ನಾಲ್ಕನೇ ದೇಶವಾಗುವ ಮಹತ್ವಾಕಾಂಕ್ಷಿ ಯೋಜನೆಯನ್ನು 2018ರ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಘೊಷಣೆ ಮಾಡಿದ್ದರು. ನಂತರದಲ್ಲಿ ಯೋಜನೆಗೆ ಕೇಂದ್ರ ಸಂಪುಟ 10 ಸಾವಿರ ಕೋಟಿ ರೂ. ಮೀಸಲಿಟ್ಟಿತ್ತು. ಇದೀಗ ಯೋಜನೆಗೆ ಪೂರ್ವ ಸಿದ್ಧತೆಗಳು ನಡೆಯುತ್ತಿದೆ.
ಒಬ್ಬರು ಮಾತ್ರ ಅಂತರಿಕ್ಷಕ್ಕೆ
ಗಗನಯಾನಕ್ಕೆ ನಾಲ್ವರನ್ನು ಆಯ್ಕೆ ಮಾಡಲಾಗಿದೆಯಾದರೂ ಒಬ್ಬರನ್ನಷ್ಟೇ ನೌಕೆಯಲ್ಲಿ ಕಳಿಸುವ ಸಾಧ್ಯತೆಯಿದೆ. ಈ ಕುರಿತ ಪ್ರತಿಕ್ರಿಯಿಸಿದ ಶಿವನ್, ಸಾಮಾನ್ಯವಾಗಿ ಮೊದಲ ಮಾನವಸಹಿತ ಯಾನದಲ್ಲಿ ಒಬ್ಬರನ್ನು ಮಾತ್ರ ಕಳಿಸಲಾಗುತ್ತದೆ. ನಾವೂ ಒಬ್ಬರನ್ನೇ ಕಳಿಸುವ ಲೆಕ್ಕಚಾರವಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಮತ್ತಷ್ಟು ಸ್ಪಷ್ಟತೆ ಸಿಗಲಿದೆ ಎಂದರು.