ಕೇರಳ, ಜ 3(Daijiworld News/MSP): ಬಾಲಿವುಡ್ ನ ಸಂಗೀತಾ ಜಗತ್ತಿನ ಜನಪ್ರಿಯ ಗಾಯಕಿ ಕಾರವಾರ ಮೂಲದ ಅನುರಾಧಾ ಪೌಡ್ವಾಲ್ "ತನ್ನ ತಾಯಿ" ಎಂದು ಕೇರಳದ ಮಹಿಳೆಯೊಬ್ಬರು ಆರೋಪಿಸಿ ಪ್ರಕರಣ ದಾಖಲಿಸಿದ್ದಾರೆ. ಹೀಗಾಗಿ ಗಾಯಕಿ ಅನುರಾಧಾ ಪೌಡ್ವಾಲ್ ಅಚಾನಕ್ ಆಗಿ ಪುತ್ರಿ ಭಾಗ್ಯದ ನಂಟು ಅಂಟುಕೊಂಡಿದೆ.
ಗಾಯಕಿ ಅನುರಾಧಾ ಪೌಡ್ವಾಲ್ ಅವರೇ ತನ್ನ ತಾಯಿ ಎಂದು 45 ವರ್ಷದ ಕರ್ಮಲಾ ಮೋಡೆಕ್ಸ್ ತಿರುವನಂತಪುರದ ಕುಟುಂಬ ಜಿಲ್ಲಾ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮಾತ್ರವಲ್ಲದೇ ಅನುರಾಧಾ ಮತ್ತು ಪತಿ ಅರುಣ್ ಪೌಡ್ವಾಲ್ ಅವರಿಂದ 50 ಕೋಟಿ ರೂ. ಪರಿಹಾರ ಕೊಡಿಸುವಂತೆ ಕೋರ್ಟ್ ಮೆಟ್ಟಿಲೇರಿದ್ದಾರೆ.
ಗಾಯಕಿ ಅನುರಾಧಾ ಮತ್ತು ಅರುಣ್ ಅವರಿಗೆ ಆದಿತ್ಯ ಪೌಡ್ವಾಲ್ ಎಂಬ ಮಗ ಮತ್ತು ಕವಿತಾ ಪೌಡ್ವಾಲ್ ಎಂಬ ಮಗಳಿದ್ದಾರೆ. ಅನುರಾಧ ಅವರು ಪದ್ಮಶ್ರೀ ಪುರಸ್ಕೃತರಾಗಿದ್ದಾರೆ. ಮಾತ್ರವಲ್ಲದೇ 2017 ರಲ್ಲಿ ಸಿವಿಲಿಯನ್ ಅವಾರ್ಡ್ ಕೂಡಾ ಪಡೆದುಕೊಂಡಿದ್ದಾರೆ.
"ಅನುರಾಧಾ ನನ್ನ ನಿಜವಾದ ತಾಯಿ, ಹುಟ್ಟಿದ ನಾಲ್ಕೇ ದಿನಕ್ಕೆ ನನ್ನನ್ನು ಪೊನ್ನಚ್ಚನ್ - ಅಗ್ನೇಶ್ ದಂಪತಿಗೆ ದತ್ತು ನೀಡಿದ್ದಾರೆ. ನನ್ನ ಸಾಕು ತಂದೆ ತಾಯಿಗೆ ಮೂವರು ಮಕ್ಕಳಿದ್ದೂ ನನ್ನನ್ನು ನಾಲ್ಕನೇ ಮಗುವಂತೆ ಬೆಳೆಸಿದರು. ನನ್ನ ದತ್ತು ಪಡೆದ ತಂದೆ ಸಾವಿಗೂ ಮುಂಚೆ ಹಾಸಿಗೆ ಹಿಡಿದಿದ್ದು ಈ ವೇಳೆ ನನ್ನ ಜನ್ಮ ರಹಸ್ಯವನ್ನು ನನಗೆ ತಿಳಿಸಿದರು.
ಖ್ಯಾತ ಗಾಯಕಿ ಅನುರಾಧಾ ತಮ್ಮ ಕರುಳ ಕುಡಿಯನ್ನು ದೂರ ಮಾಡಿದ್ದು ಯಾಕೆ ಎನ್ನುವ ಪ್ರಶ್ನೆಗೆ ಕರ್ಮಲಾ" ತಾಯಿ ಗಾಯಕಿಯಾಗಿ ಉತ್ತುಂಗದಲ್ಲಿದ್ದರು, ಆ ಸಂದರ್ಭ ನಾನು ಜನಿಸಿದೆ. ನನ್ನನ್ನು ಮಗ್ಗುಲಲ್ಲಿ ಕಟ್ಟಿಕೊಂಡು ಏಳಿಗೆ ಸಾಧಿಸಲು ಕಷ್ಟವಾಗಬಹುದು ಎನ್ನುವ ಲೆಕ್ಕಚಾರದಿಂದ ಅಮ್ಮ ಸದ್ದಿಲ್ಲದೇ ಪೊನ್ನಚ್ಚನ್ - ಅಗ್ನೇಶ್ ದಂಪತಿಗೆ ದತ್ತು ನೀಡಿದ್ದರು" ಎನ್ನುತ್ತಾರೆ.
ಈಗ್ಯಾಕೆ ತಾಯಿಯ ದಿಢೀರ್ ನೆನೆಪು ಎಂಬ ಪ್ರಶ್ನೆಗೆ "ಅಪ್ಪ ಕೆಲ ತಿಂಗಳ ಹಿಂದೆಯಷ್ಟೇ ಮೃತಪಟ್ಟಿದ್ದು, ಈ ವೇಳೆ ಹುಟ್ಟಿನ ಗುಟ್ಟು ತಿಳಿಸಿದ್ದರು. ಈ ಅಘಾತದಿಂದ ಚೇತರಿಸಿ ಅಮ್ಮ ಪೊಡ್ವಾಲ್ ಅವರಿಗೆ ಕರೆ ಮಾಡಿ ತಾಯ್ತಾನ ಒಪ್ಪಿಕೊಳ್ಳುವಂತೆ ತಿಳಿಸಿದೆ. ಆದರೆ ಅವರಿಂದ ಸೂಕ್ತ ಪ್ರತಿಕ್ರಿಯೆ ಬರಲಿಲ್ಲ. ಹೀಗಾಗಿ ಕೋರ್ಟ್ ಮೆಟ್ಟಿಲೇರಿದ್ದೇನೆ ಎನ್ನುತ್ತಾರೆ .
ಅಂದಹಾಗೆ ಕರ್ಮಲ ಅವರಿಗೆ ಮೂವರು ಮಕ್ಕಳಿದ್ದು, ಮರೆವಿನ ಕಾಯಿಲೆಯಿಂದಲೂ ಬಳಲುತ್ತಿದ್ದಾರೆ. ಸಾಕು ತಾಯಿ ಕಾಯಿಲೆಯಿಂದ ಬಳಲುತ್ತಿದ್ದು ಅವರ ಶುಶ್ರೂಷೆ ಮಾಡು ಕಷ್ಟಕರ ಜೀವನ ನಡೆಸುತ್ತಿದ್ದಾರೆ.