ಬೆಂಗಳೂರು, ಜ.03 (Daijiworld News/PY) : "ರಾಜ್ಯದಲ್ಲಿ ಪ್ರವಾಹ ಬಂದಾಗ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿಲ್ಲ, ಕಡೇ ಪಕ್ಷ ಟ್ವೀಟ್ನಲ್ಲಿಯೂ ಪ್ರವಾಹ ಸಂತ್ರಸ್ತರಿಗೆ ಸಾಂತ್ವಾನ ಹೇಳಬೇಕಿತ್ತು" ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಸಿದ್ಧರಾಮಯ್ಯ ಅವರು, "ದೇಶದ ಪ್ರಧಾನಿಯಾದ ನರೇಂದ್ರ ಮೋದಿ ಅವರು ಬಹಳ ದಿನಗಳ ಬಳಿಕ ಕರ್ನಾಟಕಕ್ಕೆ ಆಗಮಿಸಿದ್ದಾರೆ. ಪ್ರಧಾನಿಯವರ ಭೇಟಿಯನ್ನು ನಾವು ಸ್ವಾಗತಿಸುತ್ತೇವೆ" ಎಂದು ತಿಳಿಸಿದರು.
"ಆಗಸ್ಟ್ ತಿಂಗಳಿನಲ್ಲಿ 22 ಜಿಲ್ಲೆ ಹಾಗೂ 103 ತಾಲೂಕುಗಳಲ್ಲಿ ಪ್ರವಾಹ ಬಂದಿತ್ತು, ರಾಜ್ಯದ ಜನತೆ ಪ್ರವಾಹದಿಂದ ಅನೇಕ ಕಷ್ಟ-ನಷ್ಟಗಳನ್ನು ಅನುಭವಿಸಿದ್ದಾರೆ, ಆದರೂ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ ಬರಲಿಲ್ಲ" ಎಂದು ಹೇಳಿದರು.
"ಫುಡ್ ಪಾರ್ಕ್ನ ಉದ್ಘಾಟನೆ ವೇಳೆ 10 ಸಾವಿರ ನೇರ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಹೇಳಿ ಅದ್ಯಾವುದನ್ನೂ ಮಾಡಲೇ ಇಲ್ಲ, ಅಲ್ಲದೇ ಹೇಮಾವತಿ ನದಿ ಜೋಡಣೆ ಮಾಡುವುದಾಗಿಯೂ ಹೇಳಿದ್ದರು, ನದಿ ಜೋಡಣೆ ಆಗಿದೆಯೋ, ಇಲ್ಲವೋ ಎಂದು ಗೊತ್ತಿಲ್ಲ" ಎಂದು ಹೇಳಿದ್ದಾರೆ.
"ರಾಜ್ಯದಲ್ಲಿ ಪ್ರವಾಹ ಬಂದ ವೇಳೆ ಬಾರದೇ ಇದ್ದರೂ, ಟ್ವೀಟ್ ಮೂಲಕವಾದರೂ ಪ್ರವಾಹ ಸಂತ್ರಸ್ತರಿಗೆ ಸಾಂತ್ವಾನ ಹೇಳಬೇಕಿತ್ತು. ರೈತರ ಆದಾಯ 2020ಕ್ಕೆ ದುಪ್ಪಟ್ಟು ಮಾಡುತ್ತೇವೆಂದು ಹೇಳಿದ್ದರು. ರೈತರ ಸಂಕಷ್ಟ ದುಪ್ಪಟ್ಟಾಗಿದೆಯಾದರೂ ಅವರ ಆದಾಯ ದುಪ್ಪಟ್ಟವಾಗಿಲ್ಲ. ಮೋದಿ, ಯಡಿಯೂರಪ್ಪ, ಜವಡೇಕರ್ ಮಹದಾಯಿ ಬಗ್ಗೆ ಕೇವಲ ಸುಳ್ಳನ್ನೇ ಹೇಳುತ್ತಾರೆಯೇ ವಿನಃ ಮಹದಾಯಿ ವಿವಾದ ಬಗೆಹರಿದಿಲ್ಲ" ಎಂದರು.