ಬೆಂಗಳೂರು, ಜ.03 (Daijiworld News/PY) : ಮಾಸಿಕ ಕನಿಷ್ಠ ಗೌರವಧನ ರೂ.12ಸಾವಿರ ನಿಗಧಿಪಡಿಸುವಂತೆ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜಧಾನಿ ಬೆಂಗಳೂರಿನಲ್ಲಿ ಶುಕ್ರವಾರ ನಡೆಸಿದ ಪ್ರತಿಭಟನೆಯು ತೀವ್ರವಾಗುತ್ತಿರುವ ವೇಳೆ, "ಪ್ರತಿಭಟನೆ ಹಿಂಪಡೆಯಿರಿ, ನಿಮ್ಮ ಬೇಡಿಕೆಗಳನ್ನು ಸರ್ಕಾರದ ಮಿತಿಯಲ್ಲಿ ಈಡೇರಿಸುತ್ತೇವೆ" ಎಂದು ಆರೋಗ್ಯ ಸಚಿವ ಶ್ರೀರಾಮುಲು ಮನವಿ ಮಾಡಿದ್ದಾರೆ.
ದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶ್ರೀರಾಮುಲು ಅವರು, "ನಿಮ್ಮ ಬೇಡಿಕೆಗಳನ್ನು ಸರ್ಕಾರ ಈಡೇರಿಸುತ್ತದೆ, ಸರ್ಕಾರ ಯಾವಾಗಲೂ ನಿಮ್ಮೊಂದಿಗಿದೆ, ನೀವೆಲ್ಲರೂ ನಮ್ಮ ಸಹೋದರಿಯರಿದ್ದಂತೆ, ತುಂಬಾ ಕಷ್ಟಪಟ್ಟು ಬಂದಿದ್ದೀರಿ, ಈ ಬಗ್ಗೆ ನಿಮ್ಮ ಅಧ್ಯಕ್ಷರು ತಿಳಿಸಿದ್ಧಾರೆ.ಮೂರು ದಿನಗಳ ಹಿಂದೆಯೂ ಈ ಬಗ್ಗೆ ಚರ್ಚೆಯಾಗಿದೆ. ಸರ್ಕಾರದ ಕಾರ್ಯದರ್ಶಿಗಳ ಜೊತೆಗೆ ಮಾತನಾಡಿದ್ದೇನೆ. ಶೀಘ್ರವೇ ನಿಮ್ಮ ಬೇಡಿಕೆ ಈಡೇರಿಸುತ್ತೇವೆ" ಎಂದು ತಿಳಿಸಿದರು.
"ಎರಡು ತಿಂಗಳ ಸಂಬಳವನ್ನು ಪ್ರತಿ ತಿಂಗಳ 15ನೇ ತಾರೀಖಿನೊಳಗೆ ಜೊತೆಗೆ ಹಾಕಲು ಈಗಾಗಲೇ ಒಪ್ಪಿಗೆ ನೀಡಿದ್ದೇನೆ. ಈ ಹಿಂದೆ 5,500 ರೂಪಾಯಿಗಳಿತ್ತು, ಆದರೆ ಈಗ ಬಿಎಸ್ ವೈ ಸರ್ಕಾರ ಬಂದ ಮೇಲೆ ಅದನ್ನು 6 ಸಾವಿರ ರೂಪಾಯಿಗೆ ಹೆಚ್ಚಿಸಲಾಗಿದೆ. ಆಂಧ್ರ ಪ್ರದೇಶ ಸರ್ಕಾರವು ಆಶಾ ಕಾರ್ಯಕರ್ತೆಯರಿಗೆ ತಿಂಗಳಿಗೆ 10 ಸಾವಿರ ರೂಪಾಯಿ ವೇತನ ನೀಡುತ್ತಿದೆ. ನನ್ನ ಅಧಿಕಾರದಲ್ಲಿ ಕಾರ್ಯಕರ್ತೆಯರ ವೇತನವನ್ನು 10 ಸಾವಿರಕ್ಕೆ ಹೆಚ್ಚಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇನೆ" ಎಂದು ಹೇಳಿದರು.