ಬೆಂಗಳೂರು, ಜ 3(Daijiworld News/MSP): ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ರಾಜ್ಯ ಪ್ರವಾಸದ ಸಂದರ್ಭದಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಆಗಿರುವ ಅನ್ಯಾಯದ ಬಗ್ಗೆ ಪ್ರಶ್ನಿಸಿ ಗುರುವಾರ "ಉತ್ತರ ಕೊಡಿ ಮೋದಿ" ಎಂದು ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್ ಶುಕ್ರವಾರದಂದು "ಪಲಾಯನವಾದಿ ಮೋದಿ" ಎಂದು ಸರಣಿ ಟ್ವೀಟ್ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ವಿರುದ್ದ ಕಿಡಿಕಾರಿದೆ.
ನರೇಂದ್ರ ಮೋದಿಯವರು, ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿ ಇರುವುದರಿಂದ ರಾಜ್ಯದಲ್ಲೂ ಬಿಜೆಪಿ ಸರ್ಕಾರವಿದ್ದರೆ,'ಭಾಗ್ಯದ ಬಾಗಿಲು ತೆರೆಯುತ್ತದೆ' ಎಂದು ಚುನಾವಣೆ ವೇಳೆ ಹೇಳಿದ್ದರು. ಆದರೆ, ಮುಖ್ಯಮಂತ್ರಿಗಳಿಗೆ, ರಾಜ್ಯದ ಸಚಿವರಿಗೆ ಮೋದಿಯವರ ಮನೆ ಬಾಗಿಲೇ ಇನ್ನೂ ತೆರೆದಿಲ್ಲ ಎಂದು ಆರೋಪಿಸಿದ್ರೆ ಮತ್ತೊಂದು ಟ್ವೀಟ್ ನಲ್ಲಿ ರೂ.5600 ಕೋಟಿ ಜಿಎಸ್ ಟಿ ಪಾಲು, ರೂ. 2700 ಕೋಟಿ ಕುಡಿಯುವ ನೀರಿನ ಬಾಕಿ ಸೇರಿ ಕೇಂದ್ರ ರಾಜ್ಯದ ಪಾಲನ್ನು ನೀಡಿಲ್ಲ. ಹಳ್ಳಿಗರ 8.8% ರಷ್ಟು ಕೊಳ್ಳುವ ಶಕ್ತಿ ಕುಂದಿದೆ. ಬ್ಯಾಂಕ್ ಗಳು ದಿವಾಳಿಯಾಗಿವೆ. ನರೇಂದ್ರ ಮೋದಿ ಪ್ರತಿಗಾಮಿ ಆರ್ಥಿಕ ನೀತಿಗಳಿಂದ ರಾಜ್ಯ, ದೇಶವನ್ನು ದಿವಾಳಿ ಮಾಡಿದ್ದಾರೆ ಎಂದು ಆರೋಪಿಸಿದೆ.
ರಾಜ್ಯದ 22 ಜಿಲ್ಲೆಯ 103 ತಾಲೂಕುಗಳಲ್ಲಿ ಭೀಕರ ನೆರ ಬಂದಿದ್ದರೂ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಬರಲಿಲ್ಲ. ಕನಿಷ್ಟ ಟ್ವೀಟ್ ಮೂಲಕವೂ ಸಂತ್ರಸ್ತರಿಗೆ ಸಾಂತ್ವಾನ ಹೇಳಲಿಲ್ಲ. ಪ್ರಧಾನಿಯಾಗಿ ತಮ್ಮ ಜವಾಬ್ದಾರಿ ನಿಭಾಯಿಸಲು ವಿಫಲವಾಗಿದ್ದಾರೆ. ಈಗ ರಾಜ್ಯದ ಬಿಎಸ್ ವೈ ನೇತೃತ್ವ ಬಿಜೆಪಿ ಸರ್ಕಾರದ ಬೇಡಿಕೆಗೂ ಸ್ಪಂದಿಸುತ್ತಿಲ್ಲ ಎಂದು "ಪಲಾಯನವಾದಿ ಮೋದಿ" ಎಂದು ಹ್ಯಾಷ್ ಟ್ಯಾಗ್ ಮಾಡಿದೆ.