ತುಮಕೂರು ,ಜ.03 (Daijiworld News/PY) : ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ 6 ಕೋಟಿ ಕುಟುಂಬಗಳಿಗೆ 12,ooo ಕೋ.ರೂ.ಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಬಟನ್ ಒತ್ತುವ ಮೂಲಕ ನೇರವಾಗಿ ರೈತರ ಖಾತೆಗೆ ವರ್ಗಾವಣೆ ಮಾಡಿದ್ದಾರೆ.
ತುಮಕೂರಿನ ಜೂನಿಯರ್ ಕಾಲೇಜು ಮೈದಾನದಲ್ಲಿ ಗುರುವಾರ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ 2016-17 ಹಾಗೂ 2017-18ನೇ ಸಾಲಿನ ಕೃಷಿ ಕರ್ಮಣ್ ಪ್ರಶಸ್ತಿ ವಿತರಣೆಯ ಸಂದರ್ಭ ವಿಶೇಷವಾದ ಘಟನೆ ನಡೆದಿದೆ.
ಕೃಷಿ ಕರ್ಮಣ್ ಪ್ರಶಸ್ತಿ ವಿತರಣೆಯ ವೇಳೆ ಪ್ರಶಸ್ತಿ ಸ್ವೀಕರಿಸಲು ಬಂದ ಮಹಿಳೆಯೊಬ್ಬರು, ಪ್ರಶಸ್ತಿ ಸ್ವೀಕರಿಸಿ ಪ್ರಧಾನಿ ನರೇಂದ್ರ ಮೋದಿಯವರ ಪಾದಮುಟ್ಟಿ ನಮಸ್ಕರಿಸಿದ ತಕ್ಷಣ ಅದಕ್ಕೆ ಪ್ರತಿಯಾಗಿ ಪ್ರಧಾನಿ ಕೂಡ ಮಹಿಳೆಯ ಪಾದಗಳಿಗೆ ನಮಸ್ಕರಿಸಿದ್ದಾರೆ.
ಕಾರ್ಯಕ್ರಮದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಾ ಇದ್ದು, ಈ ಬಗ್ಗೆ ಟ್ವೀಟ್ ಮಾಡಿದ ಕೇಂದ್ರ ಸಚಿವ ಹರ್ಷ್ ವರ್ಧನ್ "ಪ್ರತಿಯೊಬ್ಬ ತಾಯಿಯನ್ನು ಹಾಗೂ ಮಗಳನ್ನು ಗೌರವಿಸಬೇಕು" ಎಂದಿದ್ದಾರೆ.
ಪ್ರಶಸ್ತಿ ಸ್ವೀಕರಿಸಿದ ವೇಳೆ ತನ್ನ ಪಾದಮುಟ್ಟಿ ನಮಸ್ಕರಿಸಿದ ವೇಳೆ ಪ್ರಧಾನಿ ಮೋದಿ ಅವರು ಕೂಡಾ ತಕ್ಷಣವೇ ಮಹಿಳೆಯ ಪಾದಗಳಿಗೆ ನಮಸ್ಕರಿಸಿದ್ದು, ಪ್ರಧಾನಿ ಮೋದಿ ಮಹಿಳೆಯರನ್ನು ಎಷ್ಟು ಗೌರವಿಸುತ್ತಾರೆ ಎಂಬುದಕ್ಕೆ ಕಾರ್ಯಕ್ರಮದ ವೇಳೆ ನಡೆದಿರುವುದೇ ಸಾಕ್ಷಿಯಾಗಿದೆ.